ದೇಶದಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ

7
ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಹ–ಸಂಯೋಜಕ ಕುಮಾರಸ್ವಾಮಿ

ದೇಶದಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ

Published:
Updated:
ಹಾಸನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಹ–ಸಂಯೋಜಕ ಬಿ.ಎಂ. ಕುಮಾರಸ್ವಾಮಿ ಮಾತನಾಡಿದರು.

ಹಾಸನ: ‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು, ಉದ್ಯೋಗ ಸೃಷ್ಟಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಹ–ಸಂಯೋಜಕ ಬಿ.ಎಂ. ಕುಮಾರಸ್ವಾಮಿ ಹೇಳಿದರು.

ನಗರದ ರಾಮಕೃಷ್ಣ ವಿದ್ಯಾಶ್ರಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ನಿರುದ್ಯೋಗ ಸಮಸ್ಯೆ ದೇಶದಲ್ಲಿ ವ್ಯಾಪಕವಾಗಿದೆ. ಪದವಿ ಪಡೆದ ಕೋಟ್ಯಂತರ ಯುವಜನರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಉದ್ಯೋಗ ಸೃಷ್ಠಿ ಮಾಡದಿದ್ದರೇ ಯುವ ಜನರು ದಂಗೆ ಏಳುವ ಅಥವಾ ಹಾದಿ ತಪ್ಪುವ ಸಾಧ್ಯತೆಗಳಿವೆ’ ಎಂದು ಎಚ್ಚರಿಸಿದರು.

‘ದೇಶದ ಆದಾಯದ ಶೇಕಡಾ 60 ರಷ್ಟು ಹಣ ಬಂಡವಾಳಶಾಹಿಗಳ ಜೇಬು ಸೇರುತ್ತಿದೆ. ಕೇವಲ 20 ರಷ್ಟು ಆದಾಯ ಬಡವರ್ಗದ ಜನತೆಗೆ ಸಿಗುತ್ತಿದೆ. ಭಾರತದ ಅಭಿವೃದ್ಧಿಯನ್ನು ಜಿಡಿಪಿ ಮಾನದಂಡದ ಮೇಲೆ ಅಳತೆ ಮಾಡದೆ ಉದ್ಯೋಗ ಸೃಷ್ಟಿ ಮೇಲೆ ಅಳತೆ ಮಾಡಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಸ್ವದೇಶಿ ಜಾಗರಣ ಮಂಚ್ ನಿಂದ 2016ರಲ್ಲಿ ದೇಶಾದ್ಯಂತ ಹಮ್ಮಿಕೊಂಡಿದ್ದ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಆಂದೋಲ ಯಶಸ್ವಿಯಾಗಿದ್ದು, ಈ ಆಂದೋಲನದಿಂದ 2017ರಲ್ಲಿ ದೇಶಾದಾದ್ಯಂತ ಶೇಕಡಾ 40ರಷ್ಟು ಚೀನಾ ವಸ್ತುಗಳನ್ನು ಬಹಿಷ್ಕರಿಸಲಾಯಿತು. ಈ ಬಾರಿ ‘ಅಭಿವೃದ್ಧಿ ಉದ್ಯೋಗದ ಪ್ರಧಾನವಾಗಬೇಕು’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ದೇಶದ ಮಾರುಕಟ್ಟೆಯಲ್ಲಿ ಅಮೆರಿಕಾದ ಫ್ಲಿಪ್‌ ಕಾರ್ಟ್‌, ಅಮೆಜಾನ್ ಹಾಗೂ ವಾಲ್‌ಮಾರ್ಟ್‌ನಂತಹ ಆನ್ ಲೈನ್ ಕಂಪನಿಗಳು ಅಸ್ತಿತ್ವ ಕಂಡುಕೊಳ್ಳಲು ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಪೈಪೋಟಿ ನಡೆಸುತ್ತಿವೆ. ಇದರಿಂದ ಭಾರತದ ಸಣ್ಣಪುಟ್ಟ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿ ಮುಚ್ಚುವ ಹಂತಕ್ಕೆ ತಲುಪಿವೆ. ದೇಶದ ಸಾಫ್ಟವೇರ್‌ ಕಂಪನಿಗಳು ಹೀನಾಯ ಸ್ಥಿತಿಗೆ ತಲುಪಿದ್ದು, ಇದರಿಂದ ನೂರಾರು ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುತ್ತಿವೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಭಾರತ ಮಾರುಕಟ್ಟೆಯ ಮೇಲೆ ವಿದೇಶಿ ಕಂಪನಿಗಳು ಹಿಡಿತ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಭಾರತೀಯರು ಸ್ವದೇಶಿ ವಸ್ತುಗಳ ಬಳಕೆ ಮಾಡುವ ಮೂಲಕ ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ನೆಲೆ ಸಿಗದಂತೆ ಮಾಡಬೇಕು’ ಎಂದು ಕರೆ ನೀಡಿದರು.

ರಾಷ್ಟ್ರೀಯ ಸಂಘಟಕ ಕಶ್ಮೀರಿಲಾಲ್ ಮಾತನಾಡಿ, ಈ ಬಾರಿ ನಿರುದ್ಯೋಗ, ಪರಿಸರ ಸಂರಕ್ಷಣೆ ಕುರಿತು ಹೋರಾಟ ನಡೆಸಲು ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಕ್ಕೆ  ಕೈ ಜೋಡಿಸುವಂತೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !