ಹಳೇಬೀಡು: ಕಾಗೇದಹಳ್ಳದಲ್ಲಿ ಗುರುವಾರ ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಹಳ್ಳದ ಪಕ್ಕದ ತೋಟಗಳ ಮುಣ್ಣು ಕುಸಿಯುತ್ತಿದ್ದು, ಹೊಲಬಗೆರೆ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ.
ಹೊಲಬಗೆರೆಯಲ್ಲಿ ಹಳ್ಳದ ಸೇತುವೆಯ ಪಕ್ಕದ ತೋಟದ ಕಡೆಗೆ ನಿರ್ಮಿಸಿದ ಕಟ್ಟಡ, ನೀರಿನ ರಭಸಕ್ಕೆ ಕುಸಿದಿದೆ. ನೀರಿನ ಹರಿವು ಹೆಚ್ಚಾದರೆ ತೋಟದಲ್ಲಿ ಬೆಳೆಸಿರುವ ತೆಂಗು, ಅಡಿಕೆ ಮರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿವೆ.
ನೈಸರ್ಗಿಕವಾಗಿ ಹರಿಯುವ ಹಳ್ಳದ ನೀರಿಗೆ ಸಾಕಷ್ಟು ಕಡೆ ಎತ್ತಿನಹೊಳೆ ಯೋಜನೆಯ ನಾಲೆ ಕಾಮಗಾರಿ ಅಡ್ಡಲಾಗಿದೆ. ಪರಿಣಾಮವಾಗಿ ನಾಲೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ. ಎತ್ತಿನಹೊಳೆ ಯೋಜನೆಯ ನಾಲೆ ನೀರನ್ನು ಈಗ ಹಳ್ಳಕ್ಕೆ ಬೀಡಲಾಗಿದೆ. ಹಳ್ಳದಲ್ಲಿ ಗುಡ್ಡದಿಂದ ಬರುವ ನೀರು ಹರಿಯುತ್ತಿದೆ. ಜೊತೆಗೆ ಎತ್ತಿನಹೊಳೆ ನಾಲೆ ನೀರು ಸೇರಿಕೊಂಡಿದೆ. ಗುರುವಾರ ಸಂಜೆ ಜೋರು ಮಳೆ ಬಂದಿದ್ದರಿಂದ ಹಳ್ಳ ಭೋರ್ಗರೆಯುವಂತೆ ಹರಿದು ಹೊಲಬಗೆರೆ ನಿವಾಸಿಗಳಿಗೆ ಸಮಸ್ಯೆ ತಂದೊಡ್ಡಿದೆ.
ಹಳ್ಳ ಜೋರಾಗಿ ಹರಿದಾಗ ಹೊಲಬಗೆರೆ ಗ್ರಾಮದ ದ್ವೀಪದಂತಾಗುತ್ತಿದೆ. ಹೊಲಬಗೆರೆಯಲ್ಲಿ ಬಹುತೇಕ ಮಂದಿ ತೋಟದ ಮನೆಗಳಲ್ಲಿ ವಾಸವಾಗಿದ್ದಾರೆ. ಊರಿನ ಸುತ್ತ ಹರಿಯುವ ಹಳ್ಳದಲ್ಲಿ ನೀರಿನ ವೇಗ ಹೆಚ್ಚಾದಾಗ ನಗರ, ಪಟ್ಟಣಗಳ ಸಂಪರ್ಕ ಇಲ್ಲದಂತಾಗುತ್ತದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೂ ಸಂಪರ್ಕ ಕಡಿತವಾಗುತ್ತದೆ. ಗುರುವಾರ ಸಂಜೆ ಒಂದು ತೋಟದ ಮನೆಯಿಂದ ಮತ್ತೊಂದು ತೋಟದ ಮನೆ ಸಂಪರ್ಕ ಕಡಿತಗೊಂಡು ಇಲ್ಲಿಯ ಜನರು ಪಡಬಾರದ ಕಷ್ಟ ಅನುಭವಿಸಿದರು. ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಮೊದಲಾದ ತುರ್ತು ಸಂದರ್ಭ ಬಂದರೆ ಏನು ಮಾಡುವುದು ಎಂಬ ಚಿಂತೆ ಇಲ್ಲಿಯ ಜನತೆಯನ್ನು ಕಾಡುತ್ತಿದೆ.
ಹಳ್ಳಕ್ಕೆ ಹರಿಯುವ ನೀರಿನೊಂದಿಗೆ ಎತ್ತಿನಹೊಳೆ ನಾಲೆ ನೀರು ನಗರ, ಪಟ್ಟಣ ಸಂಪರ್ಕ ಇಲ್ಲದೇ ಪರದಾಡಿದ ನಿವಾಸಿಗಳು ಹಳ್ಳಕ್ಕೆ ದೊಡ್ಡ ಕಿಂಡಿಯ ಸೇತುವೆ ನಿರ್ಮಿಸಲು ಮನವಿ
ಎತ್ತಿನಹೊಳೆ ಯೋಜನೆಯಿಂದ ಹಳೇಬೀಡು ಮಾದಿಹಳ್ಳಿ ಹೋಬಳಿ ಕೆರೆಗಳಿಗೆ ನೀರು ಹರಿಸುವುದು ಸಂತಸದ ವಿಚಾರ. ಹಳ್ಳಕ್ಕೆ ತೊಡಕಾಗದಂತೆ ನೀರು ಹರಿಸಬೇಕು.ರವಿ ರೈತ
ಹಳ್ಳದ ನೀರು ತೋಟಕ್ಕೆ ನುಗ್ಗಿತ್ತು. ತೋಟದ ಬಳಿ ವಾಸದ ಮನೆ ಇರುವುದರಿಂದ ಎಲ್ಲಿ ಕೊಚ್ಚಿ ಹೋಗುತ್ತದೆಯೋ ಎಂದು ಭಯ ಕಾಡುತ್ತಿತ್ತು. ಪಡಬಾರಾದ ಕಷ್ಟ ಅನುಭವಿಸುತ್ತಿದ್ದೇವೆ.ರಾಮಾನಾಯ್ಕ ಕಾಗೇದಹಳ್ಳ ಪಕ್ಕದ ತೋಟದ ಮನೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.