ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ

₹ 30 ಲಕ್ಷ ವೆಚ್ಚದಲ್ಲಿ 52 ಸಿಸಿಟಿವಿಟಿ ಕ್ಯಾಮೆರಾ ಅಳವಡಿಕೆ: 24 ಗಂಟೆ ನಿಗಾ
Last Updated 12 ಜನವರಿ 2023, 19:30 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ನದಿ ತೀರಗಳು, ಹಳ್ಳಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ಮುಂದಾಗಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯಕಟ್ಟು ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಈ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಡೆಯುವ ಸ್ಥಳಗಳ ಮೇಲೆ 24 ಗಂಟೆ ನಿಗಾ ವಹಿಸಲು ನಿರ್ಧರಿಸಲಾಗಿದೆ.

ಜಿಲ್ಲೆಯ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 12 ಅಕ್ರಮ ಮರಳು ಗಣಿಗಾರಿಕೆ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ತಲಾ ಎರಡು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಅಲ್ಲದೇ 14 ಪ್ರಮುಖ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಅಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

ಸೌರ ವಿದ್ಯುತ್‌ ಚಾಲಿತ ಕ್ಯಾಮೆರಾಗಳು ಸ್ಥಳದಲ್ಲಿ 24 ಗಂಟೆ ನಿಗಾ ವಹಿಸಲಿವೆ. ಆ ಕ್ಯಾಮೆರಾದಲ್ಲಿಯೂ ಮೆಮೊರಿ ಕಾರ್ಡ್‌ ಇರಲಿದ್ದು, ಅಲ್ಲಿಯೂ ದೃಶ್ಯಾವಳಿಗಳು ಸೆರೆಯಾಗಲಿವೆ. ಅಲ್ಲದೇ ಸಿಸಿಟಿವಿ ಕ್ಯಾಮೆರಾಗಳನ್ನು ನಿಯಂತ್ರಣ ಕೊಠಡಿಯ ಜೊತೆಗೆ ಜೋಡಿಸಲಾಗುತ್ತಿದ್ದು, ಆ ಕೇಂದ್ರದಲ್ಲಿಯೂ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತದೆ.

‘ಒಂದು ವೇಳೆ ಈ ಸ್ಥಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಲ್ಲಿ, ನೇರವಾಗಿ ಸಂಬಂಧಿಸಿದ ಇಲಾಖೆಗಳಿಗೆ ಸಂದೇಶ ರವಾನೆ ಆಗಲಿದೆ. ಸಾಕ್ಷಾಧಾರ ಸಮೇತ ಆರೋಪಿಗಳನ್ನು ಬಂಧಿಸಲು ಅನುಕೂಲವಾಗಲಿದೆ’ ಎನ್ನುತ್ತಾರೆ ಎಸ್ಪಿ ಹರಿರಾಂ ಶಂಕರ್‌.

ನಿಯಮದಂತೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮರಳು ಸಾಗಾಣಿಕೆಗೆ ಅವಕಾಶವಿದೆ. ಆದರೆ ರಾತ್ರಿ ವೇಳೆ ಮರಳು ಸಾಗಣೆ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಎಲ್ಲೆಲ್ಲಿ ಚೆಕ್‌ಪೋಸ್ಟ್‌: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತಿದೆ.

ಸಕಲೇಶಪುರ ತಾಲ್ಲೂಕಿನ ಗೋಪಾಲಪುರ, ಹೊಂಕರವಳ್ಳಿ, ಮಾಗಲು, ಚಂಗಡಿಹಳ್ಳಿ, ಹುಲಗತ್ತೂರು, ವಣಗೂರು–ಕೂಡುರಸ್ತೆ, ಆಲೂರು ತಾಲ್ಲೂಕಿನ ಕೆ. ಹೊಸಕೋಟೆ, ರಾಯರಕೊಪ್ಪಲು, ಗದ್ದೆಕೊಪ್ಪಲು, ಹರಿಹಳ್ಳಿ ದೇವಸ್ಥಾನ, ಅರೇಬಿಕ್ ಸ್ಕೂಲ್‌, ಬೇಲೂರು ತಾಲ್ಲೂಕಿನ ಬೇಲೂರು ಪಟ್ಟಣ, ಚೀಕನಹಳ್ಳಿ, ಚನ್ನರಾಯಪಟ್ಟ ತಾಲ್ಲೂಕಿನ ಹಿರೀಸಾವೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ.

‘ಇದುವರೆಗೆ ಹೊಸ ಮರಳು ಬ್ಲಾಕ್‌ಗಳ ಪರವಾನಗಿ ನೀಡುವ ಪ್ರಕ್ರಿಯೆ ಆರಂಭವಾಗಿಲ್ಲ. ಮರಳು ಗಣಿಗಾರಿಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಕೆಲ ಷರತ್ತುಗಳನ್ನು ವಿಧಿಸಲಾಗುವುದು. ಹೊಸದಾಗಿ ಮರಳು ಗಣಿಗಾರಿಕೆಗೆ ಲೈಸೆನ್ಸ್ ಪಡೆಯುವಾಗ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಹಾಗೂ ದಿನದ 24 ಗಂಟೆ ಮಾಹಿತಿ ನೀಡುವ ಷರತ್ತು ಹಾಕಲಾಗುವುದು’ ಎಂದು ಹರಿರಾಂ ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT