ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಚ್.ಡಿ. ದೇವೇಗೌಡರ ಕನಸು: ಸಂಸದ ಪ್ರಜ್ವಲ್‌

ಹಾಸನ ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳಬೇಕು
Last Updated 30 ಜನವರಿ 2021, 14:09 IST
ಅಕ್ಷರ ಗಾತ್ರ

ಹಾಸನ: ನಗರದ ಹೊರವಲಯದ ಬೂವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬುದು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರ ಕನಸು. ಹಾಸನ ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳಬೇಕೆ ಹೊರತು ಕೇವಲ ಇಂಡಿಯಾ ಮ್ಯಾಪ್‍ನಲ್ಲಿ ಅಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ವಿಮಾನ ನಿಲ್ದಾಣಕ್ಕಾಗಿ ದಶಕಗಳ ಹಿಂದೆಯೇ 600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೇಕಿಲ್ಲ, ಶಿವಮೊಗ್ಗ ಮಾದರಿಯ ನಿಲ್ದಾಣ ಸಾಕೆಂದರೆ ಹೇಗೆ ಸಾಧ್ಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಶನಿವಾರ ಪ್ರಶ್ನಿಸಿದರು.

‘ವಿಮಾನ ನಿಲ್ದಾಣಕ್ಕೆ 300 ಎಕರೆ ಸಾಕು, ಉಳಿದ ಭೂಮಿ ರೈತರಿಗೆ ವಾಪಸ್ ನೀಡುತ್ತೇವೆ’ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಅನುದಾನ ಪಡೆಯಲು ಸಿದ್ಧರಿದ್ದೇವೆ. ರಾಜ್ಯ ಸರ್ಕಾರ ಜಮೀನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಿ. ಅದನ್ನು ಬಿಟ್ಟು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೇಡ ಎನ್ನುವುದು ಸರಿಯಲ್ಲ’ ಎಂದು ಹೇಳಿದರು.

ಈಗಾಗಲೇ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಎಚ್.ಡಿ. ದೇವೇಗೌಡರ ಜತೆಗೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಹಾಸನ ಜಿಲ್ಲೆ ಬೆಂಗಳೂರು-ಮಂಗಳೂರು ಮಹಾನಗರಗಳಿಗೆ ಹತ್ತಿರದಲ್ಲಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಸಾಕಷ್ಟು ಅಭಿವೃದ್ಧಿ ಹೊಂದಬಹುದು. ಕಾರ್ಗೋ ವಿಮಾನ ನಿಲ್ದಾಣದ ಪ್ರಸ್ತಾವನೆಯೂ ಇದ್ದು, ಬೆಳೆಗಳನ್ನು ವಿದೇಶಕ್ಕೆ ರಫ್ತು ಮಾಡಬಹುದು. ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗಕ್ಕಿಂತ ಮೊದಲೇ ಹಾಸನದಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, 2008ರಲ್ಲಿ ಯೋಜನೆಯನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳು ಅಭಿವೃದ್ಧಿಯಾಗಬೇಕು ಎಂದರು.

ರೈತರ ಹಿತ ಬಲಿಕೊಡುವ ಯಾವ ಕಾಯ್ದೆಗಳು ಬೇಕಿಲ್ಲ. ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಘಟನೆಯಿಂದ ಬೇಸರವಾಗಿದೆ. ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ಏಕಾಏಕಿ ಆಕ್ರೋಶಗೊಂಡಿದ್ದು ಏಕೆ ಎಂಬುದಕ್ಕೆ ಉತ್ತರವಿಲ್ಲ. ಹೋರಾಟಕ್ಕೆ ಕೇಂದ್ರ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ರೈತರು ಕೆಂಪುಕೋಟೆಗೆ ನುಗ್ಗಿರಬಹುದು. ರೈತರು ತಾಳ್ಮೆ ವಹಿಸಬೇಕಿತ್ತು. ಈ ವಿಚಾರದಲ್ಲಿ ಕೇಂದ್ರ ಹಾಗೂ ರೈತರಿಂದ ತಪ್ಪಾಗಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಕಾಯ್ದೆಗಳು ಯಾವ ಕಾರಣಕ್ಕೂ ಜಾರಿಯಾಗುವುದು ಬೇಡ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT