ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2–3 ತಿಂಗಳು ಶಾಲೆ ತೆರೆಯುವ ಸಾಧ್ಯತೆ ಇಲ್ಲ

ಶಿಕ್ಷಕರ ಸಮಸ್ಯೆ ಬಗೆಹರಿಸಲು ಸಿದ್ಧ: ಸಚಿವ ಗೋಪಾಲಯ್ಯ ಭರವಸೆ
Last Updated 5 ಸೆಪ್ಟೆಂಬರ್ 2020, 13:57 IST
ಅಕ್ಷರ ಗಾತ್ರ

ಹಾಸನ: ‘ಲಾಕ್‌ಡೌನ್‌ ಸಂದರ್ಭದಲ್ಲಿ ಶಾಲೆ, ಕಾಲೇಜುಗಳು ನಡೆದಿಲ್ಲ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ
ಸರ್ಕಾರ ಸಿದ್ಧವಾಗಿದೆ’ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

ನಗರದ ಎಸ್.ಆರ್.ಎಸ್. ಪ್ರಜ್ಞಾವಿದ್ಯಾ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮ ದಿನ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದಇನ್ನು 2 ರಿಂದ 3 ತಿಂಗಳು ಶಾಲೆಗಳು ತೆರೆಯುವ ಸಾಧ್ಯತೆ ಇಲ್ಲ. ಕೊರೊನಾ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ವಿದ್ಯಾಗಮ ಕಾರ್ಯಕ್ರಮದಡಿ ಶಿಕ್ಷಕರು ನೇರವಾಗಿ ಅವರ ಮನೆಗಳಿಗೆ ತೆರಳಿ ಪಾಠ ಹೇಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆಗೆ ‘ಎ’ಗ್ರೇಡ್‌ ಬಂದಿದೆ ಎಂದು ತಿಳಿಸಿದರು.

ಶಿಕ್ಷಕರು ವಿದ್ಯೆ, ಸಂಸ್ಕೃತಿ, ಸಂಸ್ಕಾರ ಕಲಿಸುತ್ತಾರೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಒಳ್ಳೆಯ ಶಿಕ್ಷಕರಾಗಿ, ಮೈಸೂರು ಸಂಸ್ಥಾನದಲ್ಲಿ ಕೆಲಸ ಮಾಡಿ, ರಾಷ್ಟಪತಿಯಾಗಿ ಇಡೀ ಶಿಕ್ಷಕ ವೃತ್ತಿಯ ಗೌರವವನ್ನು ಎತ್ತಿ ಹಿಡಿದಿದ್ದಾರೆ ಎಂದರು

ಜಿಲ್ಲೆಯ ಪ್ರತಿ ಶಾಲೆಯಿಂದ ಒಬ್ಬ ಶಿಕ್ಷಕನನ್ನು ಆಯ್ಕೆ ಮಾಡಿ, ಒಂದೆಡೆ ಸೇರಿಸಿ ಅವರ ಜೊತೆಗೆ ಊಟ ಮಾಡಿ, ಕಷ್ಟ, ಸುಖ ಕೇಳಬೇಕೆಂಬ ಹಂಬಲ ಇತ್ತು. ಆದರೆ, ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಈ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಒಂದು ಮಗುವನ್ನು ತಿದ್ದಿ, ಜ್ಞಾನ ನೀಡಿ, ಸಮಾಜ ಮುಖಿಯಾಗಿ ಯೋಚಿಸುವ ಶಕ್ತಿ ನೀಡಿ ಪರಿಪೂರ್ಣ ವ್ಯಕ್ತಿಯಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಇತಿಹಾಸ ಪುಟ ತೆರೆದರೆ ಸಾಧನೆ ಮಾಡಿದ ಪ್ರತಿಯೊಬ್ಬರ ಹಿಂದೆಯೂ ಒಬ್ಬ ಗುರು ಇದ್ದೇ ಇರುತ್ತಾನೆ ಎಂದು ನುಡಿದರು.

ಪ್ರತಿ ವ್ಯಕ್ತಿಯೂ ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಶಿಕ್ಷಕರ ಜೊತೆಯಲ್ಲೇ ಕಳೆಯುತ್ತಾರೆ. ಶಿಕ್ಷಕರ ಕಾರ್ಯ, ಮಹತ್ವವನ್ನು ಗುರುತಿಸುವ ಕೆಲಸ ಸಮಾಜ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲಾ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅಣ್ಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಕಾಶ್‌, ಡಿಎಫ್‌ಒ ಸಿವರಾಮ್‌‌ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT