ಐಟಿ ಕೇಂದ್ರದ ಕೈ ಗೊಂಬೆಯಲ್ಲ: ಎ.ಮಂಜು ತಿರುಗೇಟು

ಭಾನುವಾರ, ಏಪ್ರಿಲ್ 21, 2019
26 °C
'ಸಿಬಿಐ ತನಿಖೆ ನಡೆಸಲು ರಾಜ್ಯಪಾಲರಿಗೆ ಪತ್ರ ಬರೆಯಲಿ'

ಐಟಿ ಕೇಂದ್ರದ ಕೈ ಗೊಂಬೆಯಲ್ಲ: ಎ.ಮಂಜು ತಿರುಗೇಟು

Published:
Updated:
Prajavani

ಹಾಸನ: ಆದಾಯ ತೆರಿಗೆ (ಐಟಿ) ಇಲಾಖೆ ಕೇಂದ್ರ ಸರ್ಕಾರದ ಕೈಗೊಂಬೆ ಅಲ್ಲ. ಮಂತ್ರಿಯಾಗಿದ್ದುಕೊಂಡು ಸಚಿವ ಎಚ್.ಡಿ.ರೇವಣ್ಣ ಅವರು ಸ್ವಾಯತ್ತ ಸಂಸ್ಥೆ ಬಗ್ಗೆ ಆ ರೀತಿ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ತಿರುಗೇಟು ನೀಡಿದರು.

ಆದಾಯ ಕುರಿತು ಸರಿಯಾದ ಮಾಹಿತಿ ನೀಡದವರ ಮನೆ, ಕಚೇರಿ ಮೇಲೆ ದಾಳಿ ಮಾಡುವುದು ಐಟಿ ಕರ್ತವ್ಯ. ಇದು ಕೇವಲ ಒಂದು ದಿನ ಪ್ರಕ್ರಿಯೆ ಅಲ್ಲ. ಹಲವು ದಿನಗಳಿಂದ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ.
ಒಂದು ವೇಳೆ ಐಟಿ ದುರುಪಯೋಗಪಡಿಸಿಕೊಂಡಿದ್ದರೆ ಸಿಬಿಐ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಿ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಚಿವ ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ₹ 1.20 ಲಕ್ಷ ದಾಖಲೆ ಇಲ್ಲದೆ ಹಣ ಪತ್ತೆಯಾಗಿದೆ. ಇದಕ್ಕೆ ಅವರು ಉತ್ತರಿಸಬೇಕು. ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಒಳ್ಳೆಯ ಸಂಪ್ರದಾಯ ಅಲ್ಲ. ಹಿಂದೆ ಡೇರಿ ಸಿಬ್ಬಂದಿ ಬಳಸಿಕೊಂಡು ಹಣ ಹಂಚುತ್ತಿರುವುದನ್ನು ನೋಡಿದ್ದೇವೆ’ ಎಂದು ಆರೋಪಿಸಿದರು.

‘ರಿಂಗ್ ರಸ್ತೆ ಮೂಲಕ ಬಿಜೆಪಿಯವರು ಹಣ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐಟಿ ಅಧಿಕಾರಿಗಳು ಮಂಗಳವಾರ ನನ್ನ ಮನೆಗೂ ಬಂದು ವಿಚಾರಿಸಿಕೊಂಡು ಹೋಗಿದ್ದಾರೆ. ಚನ್ನರಾಯಪಟ್ಟಣದಲ್ಲಿ ಸಿಕ್ಕಿರುವ ಹಣ ಯಾರದ್ದೇ ಆಗಿದ್ದರೂ ಪ್ರಕರಣ ದಾಖಲಿಸಲಿ. ಇದರಲ್ಲಿ ತಾರತಮ್ಯ ಬೇಡ’ ಎಂದರು.

‘ಗೌಡರ ಕುಟುಬದ ಆಂತರಿಕ ಕಚ್ಚಾಟದ ವಿಡಿಯೊ ಬಿಡುಗಡೆ ಮಾಡಿದರೆ, ರೇವಣ್ಣನನ್ನ ಮನೆ ಬಿಡಿಸ್ತಾರೆ. ಈಗ ಬೇಡ, ಸಮಯ ಬಂದಾಯ ಬಿಡುಗಡೆ ಮಾಡುವೆ. ಕೊಲೆಯಾಗಿರುವ ಬಸವಾಪಟ್ಟಣ ಎಂಜಿನಿಯರ್ ನಮ್ಮ ಕ್ಷೇತ್ರಕ್ಕೆ ಬರುವುದಿಲ್ಲ. ಆ ವಿಷಯ ಇದೀಗ ಬೇಡ. ಇದು ಚುನಾವಣೆ ಸಮಯ’ ಎಂದು ಪ್ರಶ್ನೆಯೊಂದಕ್ಕೆ ಎಂದರು.

1999ರ ಇತಿಹಾಸ ಮರುಕಳಿಸುತ್ತದೆ. ಅವರು ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣದಲ್ಲಿ ಅಧಿಕ ಮತಗಳ ಮುನ್ನಡೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಆ ಭಾಗದಲ್ಲಿ ಪಂಚಾಯಿತಿ ವ್ಯಾಪ್ತಿ ಸಂಚರಿಸಿದ್ದೇನೆ, ಬಿಜೆಪಿಗೆ ಪೂರಕ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಲಿತ ಸಮುದಾಯಕ್ಕೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಪಂಚ ಕ್ಷೇತ್ರಗಳಲ್ಲಿ ₹3680 ಕೋಟಿ ಅನುದಾನ ಬಿಡುಗಡೆ ಮಾಡಿ, ದಲಿತ ಸಮುದಾಯಕ್ಕೆ ಗೌರವ ತಂದು ಕೊಟ್ಟಿದೆ ಎಂದು
ಹೇಳಿದರು‌.

ಚುನಾವಣಾ ಆಯೋಗ ಕ್ಷೇತ್ರದಲ್ಲಿ 73 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಎಂದು ಪರಿಗಣಿಸಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿದೆ. ಬಿಜೆಪಿಗೆ ಬೂತ್‌ ಏಜೆಂಟ್‌ ಸಮಸ್ಯೆ ಇಲ್ಲ ಎಂದ ಅವರು, ದೇಶದ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಶಾಸಕ ಪ್ರೀತಂ ಜೆ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !