ಗುರುವಾರ , ಸೆಪ್ಟೆಂಬರ್ 19, 2019
26 °C
ಪದವಿ ಪ್ರದಾನ ಸಮಾರಂಭ

ಜಾಗತಿಕ ಆರೋಗ್ಯವರ್ಧನೆಗೆ ಆಯುರ್ವೇದ ಅಗತ್ಯ: ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ

Published:
Updated:
Prajavani

ಹಾಸನ: ಶರೀರ ಮತ್ತು ಮನಸ್ಸಿನ ಅಸಮತೋಲನ ಸರಿದೂಗಿಸುವ ಆಯುರ್ವೇದ ವಿಜ್ಞಾನ, ಮನೋದೈಹಿಕ ಕಾಯಿಲೆ ತಡೆಗಟ್ಟಲು ಹಾಗೂ ನಿವಾರಿಸಲು ಅತ್ಯವಶ್ಯಕ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ನಗರದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ 22ನೇ ಪದವಿ ಪ್ರದಾನ ಸಮಾರಂಭ ‘ವಿಶಿಖಾನು’ ಪ್ರವೇಶದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ನಿರಂತರ ಅಧ್ಯಯನ, ಸಂಶೋಧನೆ ಮತ್ತು ಸೇವಾ ಕಾರ್ಯದಲ್ಲಿ ತೊಡಗುವ ಮೂಲಕ ಆಯುರ್ವೇದ ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕು ಎಂದು ಯುವ ಆಯುರ್ವೇದ ವೈದ್ಯರಿಗೆ ಕಿವಿಮಾತು ಹೇಳಿದರು.

ಪದವಿ ಪ್ರದಾನ ಮಾಡಿ ಮಾತನಾಡಿದ ಆಯುಷ್ ಸಚಿವಾಲಯದ ಕಾರ್ಯದರ್ಶಿ ಡಾ. ರಾಜೇಶ್ ಕೊಟೆಚಾ, ವೀರೇಂದ್ರ ಹೆಗ್ಗಡೆ ಅವರು ಮೂರು ದಶಕ ಹಿಂದೆಯೇ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸಾ ವಿಜ್ಞಾನಗಳ ಬೆಳವಣಿಗೆಗೆ ನಾಂದಿ ಹಾಡಿದ್ದರು. ಮುಂಬರುವ ದಿನಗಳಲ್ಲಿ ಅನೇಕ ದೇಶಗಳಲ್ಲಿ ಆಯುರ್ವೇದದ ಬೇಡಿಕೆ ಹೆಚ್ಚಲಿದೆ ಎಂದು ತಿಳಿಸಿದರು.

ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್.ಸಚ್ಚಿದಾನಂದ ಮಾತನಾಡಿ, ಯುವ ವೈದ್ಯರು ಮಾದರಿ ಜೀವನ ನಡೆಸಬೇಕು. ಜ್ಞಾನವನ್ನು ಮೊನಚುಗೊಳಿಸಬೇಕು ಹಾಗೂ ಇತರೆ ತಜ್ಞ ವೈದ್ಯರೊಡನೆ ಚರ್ಚಿಸಿ ಗೊಂದಲ ನಿವಾರಿಸಿಕೊಳ್ಳಬೇಕು. ರೋಗಿಗಳ ಜತೆ ಉತ್ತಮ ಬಾಂಧವ್ಯ ಇರಿಸಿಕೊಂಡು ವೃತ್ತಿಪರತೆ ಹೊಂದಬೇಕು. ಹಣದ ಹಿಂದೆ ಹೋಗಬಾರದು. ಅದೇ ನಿಮ್ಮನ್ನು ಹಿಂಬಾಲಿಸುವಂತೆ ಸಾರ್ಥಕ ಕಾಯಕ ಮಾಡಬೇಕು. ಮಾತೃ ವಿದ್ಯಾಸಂಸ್ಥೆ ಜತೆ ನಿರಂತರ ಸಂಪರ್ಕದಲ್ಲಿರುವುದು ಒಳಿತು ಎಂದು ಸಲಹೆ ನೀಡಿದರು.

68 ಬಿಎಎಂಎಸ್ ಪದವೀಧರರು, 93 ವಿವಿಧ ಸ್ನಾತಕೋತ್ತರ ವಿಭಾಗಗಳ ಪದವೀಧರರು ಹಾಗೂ ಪಿಎಚ್‍.ಡಿ ವಿದ್ಯಾರ್ಥಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹ ರಾವ್, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ.ಗುರುದೀಪ್ ಸಿಂಗ್, ಉಡುಪಿಯ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ.ಬಿ.ರವಿ ಶಂಕರ್, ಬೆಂಗಳೂರಿನ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಗದೀಶ್ ಕುಂಜಾಲ್, ಉಜಿರೆಯ ಎಸ್.ಡಿ.ಎಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ್ ಆಚಾರ್ಯ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ. ಶೈಲಜಾ.ಯು, ಶೈಕ್ಷಣಿಕ ವಿಭಾಗದ ಡೀನ್ ಡಾ.ಗಿರೀಶ್.ಕೆ.ಜೆ, ಮತ್ತು ಹೆಚ್ಚುವರಿ ಡೀನ್ ಡಾ.ಪ್ರಕಾಶ್ ಹೆಗಡೆ, ವೈದ್ಯಕೀಯ ಅಧೀಕ್ಷಕ ಡಾ.ಮುರಲೀಧರ್ ಪಿ.ಪೂಜಾರ್‌ ಹಾಜರಿದ್ದರು.

ಡಾ.ಹರಿಣಿ ಮತ್ತು ಡಾ.ಗುರುಬಸವರಾಜ್ ಯಲಗಚ್ಚಿನ ನಿರೂಪಿಸಿದರು.

 

Post Comments (+)