ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಧರ್ಮ ಜಾಗೃತಿ ಮೂಡಿಸಿದ ಅಗ್ರಗಣ್ಯ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿನಯಾಂಜಲಿ
Last Updated 23 ಸೆಪ್ಟೆಂಬರ್ 2019, 12:57 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ವಿದ್ಯಾನಂದ ಮುನಿ ಮಹಾರಾಜರು (94) ದೆಹಲಿಯ ಕುಂದ ಕುಂದ ಭವನದಲ್ಲಿ ಸಲ್ಲೇಖನ ಪೂರ್ವಕ ಸಮಾಧಿ ಮರಣದ ಸಮಾಚಾರ ತಿಳಿದು ದುಃಖವಾಯಿತು. ಆಧುನಿಕ ಜೈನ ಧರ್ಮ ಜಾಗೃತಿ ಮಾಡಿದವರಲ್ಲಿ ಅಗ್ರಗಣ್ಯರು ಎಂದು ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿನಯಾಂಜಲಿ ಸಲ್ಲಿಸಿದ್ದಾರೆ.

2ನೇ ನಾಗವರ್ಮನ ’ವರ್ಧಮಾನ ಪುರಾಣ’ ಪ್ರತಿ ಮಾಡಿದವರ ಮನೆತನದಿಂದ ಬಂದ ವಿದ್ಯಾನಂದರು, ಬೆಳಗಾವಿ ಜಿಲ್ಲೆ ಶೇಡಬಾಳದಲ್ಲಿ ಜನಿಸಿದರೂ ಕಾರ್ಯಕ್ಷೇತ್ರ ದೇಶದ ರಾಜಧಾನಿ ದೆಹಲಿಯಾಗಿತ್ತು.

ದೇಶದಾದ್ಯಂತ ಪಾದಯಾತ್ರೆ ಮಾಡಿ ವಿಶ್ವಧರ್ಮ ಪ್ರವಚನ ಮಾಡಿದ್ದರು. ಕನ್ನಡ, ಹಿಂದಿ, ಮರಾಠಿಯಲ್ಲಿ ಪ್ರಭುತ್ವ ಹೊಂದಿದ ಇವರು ಉತ್ತಮ ಪ್ರವಚನಕಾರರಾಗಿದ್ದರು. ಧರ್ಮಚಕ್ರ ಶ್ರೀ ವಿಹಾರ, ಜನಮಂಗಲ ಕಲಶ ವಿಹಾರದಂತಹ ಕಾರ್ಯಕ್ರಮ ಹಾಗೂ ಅನೇಕ ಧರ್ಮ ಪ್ರಭಾವನೆ ಕಾರ್ಯ ಮಾಡಲು ಪ್ರೇರಣೆ ನೀಡಿದ್ದರು.

ಜೈನ ಧರ್ಮದ ಕಠೋರ ನಿಯಮವುಳ್ಳ ಮುನಿ ಧರ್ಮವನ್ನು ತ್ಯಾಗ, ತಪಸ್ಸನ್ನು ಪರಿಪಾಲನೆ ಮಾಡುತ್ತಾ ಜಿನ ಶಾಸನದ ಪ್ರಭಾವನೆ ಮಾಡಿರುವುದು ಅವಿಸ್ಮರಣೀಯ.. ದೇಶ ಭೂಷಣ ಮುನಿ ಮಹಾರಾಜರಿಂದ ಮುನಿ ದೀಕ್ಷೆ ಪಡೆದು ಅವರ ಉತ್ತರಾಧಿಕಾರಿಯಾಗಿ ಆಚಾರ್ಯ ಪದವಿ ಪಡೆದಿದ್ದರು.

ಜಿನ ಶಾಸನ ಪ್ರಭಾವನೆಗಾಗಿ ಭಟ್ಟಾರಕ ಪರಂಪರೆಯ ಉನ್ನತಿಗೆ ನಿರಂತರವಾಗಿ ಪ್ರೇರಣೆ ನೀಡುತ್ತಿದ್ದರು. ಅನೇಕ ತೀರ್ಥ ಕ್ಷೇತ್ರಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದ್ದು, ಶ್ರವಣಬೆಳಗೊಳದ ಬಾಹುಬಲಿ ಸ್ವಾಮಿಯ 1981ರ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕದ ಸಾನಿಧ್ಯ ವಹಿಸಿ ಮಹೋತ್ಸವ ಯಶಸ್ವಿಗೊಳಿಸಿದ್ದರು.

‘ಪ್ರಥಮ ಬಾರಿಗೆ ಮಂದಿರದಿಂದ ಹೊರ ಬಂದು ತೆರೆದ ಮೈದಾನದಲ್ಲಿ ಲಕ್ಷಾಂತರ ಜನರ ಸಭೆಗಳಲ್ಲಿ ಜೈನಧರ್ಮವನ್ನು ವಿಶ್ವಧರ್ಮವನ್ನಾಗಿ ಪ್ರತಿಪಾದಿಸುವ ಪ್ರವಚನ ನೀಡಿದ್ದಾರೆ. ಇವರ ಸಮಾಧಿ ಮರಣದಿಂದ ಜೈನ ಸಮಾಜಕ್ಕೆ ತುಂಬಲಾಗದ ನಷ್ಟವುಂಟಾಗಿದೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT