ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಬಸದಿಯಲ್ಲಿ ನಾಲ್ಕು ಜೈನ ಶಾಸನ ಪತ್ತೆ

ಪುರಾತನ ಸಂಸ್ಕೃತಿ ತಿಳಿಸುವ 12 ರಿಂದ 15ನೇ ಶತಮಾನಕ್ಕೆ ಸೇರಿವೆ
Last Updated 21 ಜನವರಿ 2020, 19:45 IST
ಅಕ್ಷರ ಗಾತ್ರ

ಹಾಸನ: ನಗರದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ ಶತಮಾನಕ್ಕೆ ಸೇರಿದ ನಾಲ್ಕು ಜೈನ ಶಾಸನಗಳು ಪತ್ತೆಯಾಗಿವೆ.

ಈ ಜೈನ ಶಿಲಾ ಶಾಸನಗಳನ್ನು ಬೆಂಗಳೂರಿನ ಎಚ್. ಪಿ. ನಿತಿನ್ ಅವರು ಕ್ಷೇತ್ರ ಕಾರ್ಯ ವೇಳೆ ಪತ್ತೆ ಮಾಡಿದ್ದಾರೆ.

ದೇವಿಗೆರೆ ಸಮೀಪದ ದೊಡ್ಡ ಬಸದಿಯ ಪಾರ್ಶ್ವನಾಥ ತೀರ್ಥಂಕರ, ಮೊದಲ ಅಂತಸ್ತಿನ ನೇಮಿನಾಥ ತೀರ್ಥಂಕರ, ಬಸದಿಯ ನವರಂಗದ ಕಂಬದ ಮೇಲೆ ಹಾಗೂ ಬಸದಿ ಆವರಣದಲ್ಲಿರುವ ಜೆಟ್ಟಿಗೆರಾಯನ ಗುಡಿ ಹೊರಭಾಗದ ಪೀಠದ ಮೇಲೆ ಶಾಸನಗಳು ಪತ್ತೆಯಾಗಿವೆ.

‘ಜಿಲ್ಲೆಯು ಶಾಸನಗಳ ನೆಲೆವೀಡಾಗಿದ್ದು, ಅದರಲ್ಲೂ ವಿಶೇಷವಾಗಿ ಶ್ರವಣಬೆಳಗೊಳದಲ್ಲಿ ಸುಮಾರು 600 ಜೈನ ಶಾಸನ ಪತ್ತೆಯಾಗಿದೆ. ಆದರೆ ನಗರದಲ್ಲಿ ಯಾವುದೇ ಜೈನ ಶಾಸನಗಳು ಪತ್ತೆಯಾಗಿರಲಿಲ್ಲ. ಈ ಶಾಸನಗಳು ಜೈನ ಪರಂಪರೆಯ ಪುರಾತನ ಸಂಸ್ಕೃತಿ ತಿಳಿಸುತ್ತವೆ’ ಎಂದು ನಿತಿನ್ ಅಭಿಪ್ರಾಯಪಟ್ಟರು.

ಬಸದಿ ಜೀರ್ಣೋದ್ಧಾರದ ಸಮಯದಲ್ಲಿ ನೇಮಿನಾಥ ವಿಗ್ರಹ ತೆಗೆದು ಮತ್ತೊಂದು ಜಾಗದಲ್ಲಿ ಇರಿಸಲಾಗಿತ್ತು. ಹಿಂದೆ ಕಾಂಕ್ರೀಟ್‌ನಲ್ಲಿ ಮುಚ್ಚಿ ಹೋಗಿದ್ದ ಭಾಗದಲ್ಲಿ ಈ ಶಾಸನ ಬೆಳಕಿಗೆ ಬಂದಿದೆ.

ಬಸದಿಯ ಮೂಲ ಸ್ವಾಮಿ ಪಾರ್ಶ್ವನಾಥ ತೀರ್ಥಂಕರ ವಿಗ್ರಹವನ್ನು ಜೀರ್ಣೋದ್ಧಾರದ ಕಾರಣ ತೆಗೆದಿದ್ದರಿಂದ ಕಾಂಕ್ರೀಟ್‌ನಲ್ಲಿ ಮುಚ್ಚಿ ಹೋಗಿದ್ದ ಪೀಠದ ಭಾಗದಲ್ಲಿ ಶಾಸನ ಸಿಕ್ಕಿದೆ.

ದೊಡ್ಡ ಬಸದಿಯ ನವರಂಗ ಕಂಬವೊಂದರ ಮೇಲ್ಭಾಗದಲ್ಲಿ ಎರಡು ಸಾಲಿನ ಶಾಸನ ಹಾಗೂ ಕೆಳಭಾಗದಲ್ಲಿ ಕಾಯೋತ್ಸರ್ಗ ಭಂಗಿಯಲ್ಲಿ ನಿಂತಿರುವ ಜೈನ ಮುನಿಯ ಕೆತ್ತನೆಯಿದೆ. ಮುನಿಗಳ ಕೆತ್ತನೆ ಇರುವ ಕೆಳಭಾಗ ಕಾಂಕ್ರೀಟ್ ಹಾಗೂ ಮಾರ್ಬಲ್ ನಿಂದ ಮುಚ್ಚಲಾಗಿದೆ. ಈ ಭಾಗದಲ್ಲಿ ಶಾಸನ ಇದೆ.

ಬಸದಿ ಆವರಣದ ಜೆಟ್ಟಿಗೆರಾಯನ ಗುಡಿ ಮಂಟಪದ ರೂಪದಲ್ಲಿದ್ದು, ಈ ಕಲ್ಲಿನ ಮಂಟಪದ ಹೊರ ಪೀಠದ ಮೇಲೆ ಎರಡು ಸಾಲಿನ ಶಾಸನ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT