ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಕೊಡುವ ಭೂ ಮಾಲೀಕರಿಗೆ ನಿವೇಶನ

ರೈತರ ಸಮ್ಮತಿ ಪಡೆದು ಬಡಾವಣೆ ಅಭಿವೃದ್ಧಿ: ಸಚಿವ ರೇವಣ್ಣ
Last Updated 26 ಜೂನ್ 2019, 17:31 IST
ಅಕ್ಷರ ಗಾತ್ರ

ಹಾಸನ: ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ಮಂಡಳಿ ವತಿಯಿಂದ ನಗರದ ಹೊರವಲಯದಲ್ಲಿನ ಉದ್ದೇಶಿತ ನೂತನ ಬಡಾವಣೆಗಳ ಅಭಿವೃದ್ಧಿ ಕುರಿತು ಸಚಿವ ಎಚ್.ಡಿ. ರೇವಣ್ಣ ಅವರು ಸುದೀರ್ಘ ಸಭೆ ನಡೆಸಿದರು.

ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಗೆ ತಂಡ ತಂಡಗಳಾಗಿ ಬಂದಿದ್ದ ರೈತರೊಂದಿಗೆ ಮಾತನಾಡಿದ ಸಚಿವರು, ಎಲ್ಲರ ಅಭಿಪ್ರಾಯಗಳನ್ನು ಆಲಿಸಿದರು.

ರೈತರ ಹಿತ ಸಂರಕ್ಷಣೆ ಆದ್ಯತೆಯಾಗಿದೆ. ಈ ಹಿಂದೆಯೂ ತಾವು ಇದೇ ಕ್ರಮಗಳನ್ನು ಅನುಸರಿಸಿದ್ದು, ಎಲ್ಲರ ಸಹಕಾರದೊಂದಿಗೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಯಾವ ರೈತರು ಸ್ವಯಂ ಪ್ರೇರಣೆಯಿಂದ ಜಮೀನನ್ನು ನಿವೇಶನಗಳ ಅಭಿವೃದ್ಧಿಗೆ ಬಿಟ್ಟುಕೊಡಲು ಬಯಸುತ್ತಾರೆ, ಅವರಿಂದ ಸಮ್ಮತಿ ಪತ್ರ ಪಡೆದು ಬಡವಾಣೆಗಳ ಪ್ರಗತಿ ಕಾರ್ಯ ಮಾಡಿ ಶೇಕಡಾ 50:50ರ ಅನುಪಾತದಲ್ಲಿ ಭೂಮಾಲೀಕರಿಗೆ ನಿವೇಶನಗಳನ್ನು ಬಿಟ್ಟು ಕೊಡಲಾಗುವುದು ಎಂದು ಸಚಿವರು ತಿಳಿಸಿದರು.

ಭೂಮಿ ನೀಡಲು ಬಯಸದ ರೈತರಿಗೆ ಯಾವುದೇ ಒತ್ತಾಯವಿಲ್ಲ. ಅವರು ಕೃಷಿಯನ್ನು ಮುಂದುವರೆಸಬಹುದು. ಆದರೆ 1-2 ಗುಂಟೆ ಲೆಕ್ಕದಲ್ಲಿ ಜಮೀನುಗಳನ್ನು ನಿವೇಶನಗಳನ್ನಾಗಿ ತುಂಡರಿಸಿ ಮಾರುವಂತಿಲ್ಲ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.

ಜಮೀನು ಬಿಟ್ಟುಕೊಟ್ಟವರಿಗೆ ಮೊದಲ ಆದ್ಯತೆ ಮೇರೆಗೆ ಮುಂದಿನ ನಾಲ್ಕು ತಿಂಗಳೊಳಗಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಬೇಕು. ಆ ನಂತರ ಒಟ್ಟಾರೆ ಬಡಾವಣೆ ನಿರ್ಮಿಸಿ ಅರ್ಜಿದಾರರಿಗೆ ಸೈಟ್‍ಗಳನ್ನು ವಿತರಿಸಬೇಕು. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ಮಂಡಳಿ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ರೇವಣ್ಣ ನಿರ್ದೇಶನ ನೀಡಿದರು.

ಬಡಾವಣೆ ಅಭಿವೃದ್ಧಿ ವೇಳೆ ಬರುವ ವಾಣಿಜ್ಯ ಉದ್ದೇಶಿತ ನಿವೇಶನಗಳಲ್ಲಿ ಕೆಲವನ್ನು ಭೂಮಾಲೀಕರಿಗೆ ಮೀಸಲಿಟ್ಟು ಪ್ರತ್ಯೇಕವಾಗಿ ಹರಾಜು ಪ್ರಕ್ರಿಯೆ ನಡೆಸಬೇಕು. ರೈತರ ಹಿತಕಾಯುತ್ತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ರಾಜೇಗೌಡ ಅವರು ತಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿದರು.

ಭೂಮಾಲೀಕರ ಸಮ್ಮತಿ ಪಡೆದು ನಿವೇಶನಗಳ ಅಭಿವೃದ್ಧಿ ಪಡಿಸುವುದು ಹೆಚ್ಚು ಸಮಂಜಸ ಹಾಗೂ ರಚನಾತ್ಮಾಕ ಪ್ರಯತ್ನವಾಗಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಗಿರೀಶ್ ನಂದನ್, ಶ್ರೀನಿವಾಸಗೌಡ, ನಗರಾಭಿವೃದ್ಧಿ ಆಯುಕ್ತ ರಮೇಶ್ ಹಾಗೂ ಗೃಹ ಮಂಡಳಿ ಎಂಜಿನಿಯರ್‌ಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT