ಶನಿವಾರ, ಸೆಪ್ಟೆಂಬರ್ 21, 2019
21 °C
ಜೆಡಿಎಸ್‌ ಕಾರ್ಯಕರ್ತರ ಸಭೆ

ಜನರ ಸಮಸ್ಯೆ ಆಲಿಸಲು ಪಾದಯಾತ್ರೆ: ಸಂಸದ ಪ್ರಜ್ವಲ್‌ ರೇವಣ್ಣ

Published:
Updated:
Prajavani

ಹಾಸನ: ಜಿಲ್ಲೆಯ ಜನರ ಸಮಸ್ಯೆ ಆಲಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ನಗರದ ಗೋಮತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಕಾರ್ಯಕರ್ತ ಸಮಾವೇಶದಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಸೋತಿರಬಹುದು. ಕಾರ್ಯಕರ್ತರು ಸೋತಿಲ್ಲ. ಮತ್ತೆ ಜೆಡಿಎಸ್‌ ಬಾವುಟ ಹಾರಿಸಲಾಗುವುದು. ಪಕ್ಷ ಬಲಪಡಿಸಲು ಎಲ್ಲರೂ ಒಗ್ಗಟಾಗಬೇಕು ಎಂದು ಕರೆ ನೀಡಿದರು.

ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯದೆ ತಪ್ಪು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸಲಾಗುವುದು. ರಾಜ್ಯ ಘಟಕದ ಅಧ್ಯಕ್ಷರ ಸಲಹೆಯಂತೆ ಮಹಿಳಾ, ಯುವ, ನಗರ ಘಟಕ ರಚಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯಕರ್ತರ ಸಭೆ ಮಾಡಬೇಕು ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಏನು ಕಡಿದು ಕಟ್ಟೆ ಹಾಕ್ತಿದಾರೆ ಎಂದು ಪ್ರಶ್ನಿಸಿದ ಪ್ರಜ್ವಲ್‌, ‘ಸುಳ್ಳು ಭರವಸೆ ನೀಡಿ ಮತ್ತೆ ಅಧಿಕಾರಕ್ಕೆ ಬಂದರು. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾಯಿತು. ಏನೂ ಕೆಲಸ ಆಗುತ್ತಿಲ್ಲ. ಯಡಿಯೂರಪ್ಪ ಅವರು ರೈತರನ್ನು ಮರೆತಿದ್ದಾರೆ. ರೈತರ ಸಾಲ ಮನ್ನಾದ ವಿವರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು’ ಎಂದು ವಿವರಿಸಿದರು.

‘ಮೋದಿ ಮೋದಿ ಮೋದಿ ಅಂತೀರಲ್ಲ ಸ್ವಾಮಿ. ಸುಳ್ಳು ಕನಸುಗಳನ್ನು ಸೃಷ್ಟಿ ಮಾಡಿದರು. ಎರಡು ಕೋಟಿ ಉದ್ಯೋಗದ ಬೊಗಳೆ ಮಾತಾಡಿದರು. ನಿರುದ್ಯೋಗ ಸಮಸ್ಯೆಗೆ ಕಾರಣ ಯಾರು. ಕೆಲಸ ಕೊಡದಿದ್ದರೆ ತೊಂದರೆ ಇಲ್ಲ, ಇರುವ ಕೆಲಸ ಉಳಿದರೆ ಸಾಕು ಎಂಬ ನಿರ್ಧಾರಕ್ಕೆ ಯುವಕರು ಬಂದಿದ್ದಾರೆ. ಗಾಡಿ ಓಡುತ್ತೆ ಎಂಬ ಕಾರಣಕ್ಕೆ ಓಡಿ ಹೋಗಿ ಹತ್ತೋದಲ್ಲ. ವಿಚಾರ ಮಾಡಬೇಕು. ಬಿಜೆಪಿಯವರು ಬಂದರೆ ವಾಪಸ್ ಕಳುಹಿಸಿ’ ಎಂದರು.

ರಷ್ಯಾ ಅಭಿವೃದ್ಧಿಗೆ ₹ 7,200 ಕೋಟಿ ನೀಡುವುದಾಗಿ ಪ್ರಧಾನಿ ಮೋದಿ ವಾಗ್ದಾನ ಮಾಡಿ ಬಂದಿದ್ದಾರೆ. ರಾಜ್ಯದಲ್ಲಿ ₹ 32 ಸಾವಿರ ಕೋಟಿ ನಷ್ಟವಾದರೆ ₹ 200 ಕೋಟಿ ಮಾತ್ರ ನೀಡಲಾಗಿದೆ. ದೇಶದ ಜನರ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರ ಹದಿನಾಲ್ಕು ತಿಂಗಳಲ್ಲಿ ಏನು ಮಾಡಿದೆ ಎನ್ನುವುದು ಚರ್ಚೆಯಾಗಲಿ. 1,19,840 ಕುಟುಂಬಕ್ಕೆ ಒಂದೂವರೆ ಸಾವಿರ ಕೋಟಿ ಸಾಲ ಮನ್ನಾ ಆಗಿದೆ. ಯಡಿಯೂರಪ್ಪ ಬಂದು ಒಂದೂವರೆ ತಿಂಗಳಾಯಿತು. ಜಿಲ್ಲಾ ಬ್ಯಾಂಕ್‌ಗೆ ಬರಬೇಕಾಗಿದ್ದ ₹ 115 ಕೋಟಿ ಬಿಡುಗಡೆ ಮಾಡಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿ ಹೇಗೆ ನಿಲ್ಲಿಸುತ್ತಾರೆ ನೋಡುತ್ತೇವೆ. ಹೆದರಿ ಮನೆಗೆ ಹೋಗುವುದಿಲ್ಲ. ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸೆ. 12ರಂದು ಬಿಡುಗಡೆ ಮಾಡಲಾಗುವುದು. ಕಟ್ಟಾಯಕ್ಕೆ ಸಮುದಾಯ ಆಸ್ಪತ್ರೆ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಹದಿನಾಲ್ಕು ತಿಂಗಳಲ್ಲಿ ಜನಪರ ಆಡಳಿತ ನೀಡಿದೆ. ಪಕ್ಷ ಬಲಪಡಿಸಲು ಪ್ರತಿ ತಾಲ್ಲೂಕಿನಲ್ಲಿ 10 ರಿಂದ 15 ಘಟಕ ರಚಿಸಲಾಗುವುದು. ಪ್ರತಿ ಘಟಕದಲ್ಲಿ 25 ಜನರು ಇರುತ್ತಾರೆ. ಎಲ್ಲಾ ವರ್ಗದವರಿಗೂ ಆದ್ಯತೆ ನೀಡಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿ ನಿಲ್ಲಿಸಿದರೆ ಹೋರಾಟ ಮಾಡಲಾಗುವುದು ಎಂದು ಬಿಜೆಪಿಗೆ ಎಚ್ಚರಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಮುಖಂಡರಾದ ಕರೀಂಗೌಡ, ದೊಡ್ಡೇಗೌಡ, ಚನ್ನವೀರಪ್ಪ, ಅಣ್ಣಪ್ಪ ಶೆಟ್ಟಿ, ರಾಜೇಗೌಡ, ಪಟೇಲ್‌ ಶಿವರಾಂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ವರೂಪ್‌ ಇದ್ದರು.

 

Post Comments (+)