ಜನವಿರೋಧಿ ಮೌಢ್ಯ ಆಚರಣೆ ತಿರಸ್ಕರಿಸಲು ಕರೆ

6
ಶಿಬಿರದಲ್ಲಿ ವೈಜ್ಞಾನಿಕ ಭಿತ್ತಿಪತ್ರ ಅನಾವರಣ

ಜನವಿರೋಧಿ ಮೌಢ್ಯ ಆಚರಣೆ ತಿರಸ್ಕರಿಸಲು ಕರೆ

Published:
Updated:
Deccan Herald

ಹಾಸನ: ಮೌಢ್ಯ ಆಚರಣೆಗಳಿಂದ ಮಾನ, ಧನ, ಆರೋಗ್ಯ ಹಾನಿ ಮತ್ತು ಸಮಯ ವ್ಯರ್ಥ. ಈ ರೀತಿಯ ಆಚರಣೆಗಳನ್ನು ತಿರಸ್ಕರಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಬೇಕು ಎಂದು ಮಣಿ ಸೂಪರ್ ಸ್ಪಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ದಿನೇಶ್ ಹೇಳಿದರು.

ರಾಷ್ಟ್ರೀಯ ವೈಜ್ಞಾನಿಕ ಮನೋಧರ್ಮ ಅಭಿವೃದ್ಧಿ ಆಂದೋಲನ ಅಂಗವಾಗಿ ಭಾರತ ವಿಜ್ಞಾನ ಸಮಿತಿ (ಬಿಜಿವಿಎಸ್) ಏರ್ಪಡಿಸಿದ್ದ ಸಂಚಾಲಕರ ಸಬಲೀಕರಣದ ಶಿಬಿರವನ್ನು ವೈಜ್ಞಾನಿಕ ಭಿತ್ತಿಪತ್ರ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆಚರಣೆಗಳು ಜನಸಾಮಾನ್ಯರಿಗೆ ಒಳಿತು ಉಂಟು ಮಾಡುವಂತಿರಬೇಕು. ನವಜಾತ ಶಿಶುಗಳಿಗೆ ಎದೆ ಹಾಲು ಉಣಿಸಬಾರದು, ಎಳೆ ಮಕ್ಕಳ ದೇಹದ ಮೇಲೆ ಕಾಯಿಸಿದ ಬರೆ ಹಾಕುವುದು, ಪ್ರಸವದ ನಂತರ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡದಿರುವುದು ಹಾಗೂ ಮಕ್ಕಳಿಗೆ ಸ್ನಾನ ಮಾಡಿಸುವಾಗ ತಲೆ ಮೇಲೆ ಸುಡುತ್ತಿರುವ ನೀರು ಸುರಿಯುವುದನ್ನು ಮಾಡಲಾಗುತ್ತಿದೆ. ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.

ಮಲ್ನಾಡ್ ತಾಂತ್ರಿಕ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ್ ಅಯ್ಯರ್ ಮಾತನಾಡಿ, ಮಾನವನ ಬದುಕಿನ ನಡೆ ನುಡಿಗಳು ಪರಿಸರಕ್ಕೆ ಪೂರಕವಾಗಿರಬೇಕು. ಅನೇಕ ಮೌಢ್ಯ ಆಚರಣೆಗಳು ಕಾಶಿಯಂತಹ ಪವಿತ್ರ ಸ್ಥಳಗಳಲ್ಲಿ ಹರಿಯುತ್ತಿರುವ ನದಿ, ತೊರೆಗಳ ನೀರನ್ನು ಕಲುಷಿತಗೊಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಂ.ಕೃಷ್ಣ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ. ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ವಿಜ್ಞಾನ ಪ್ರಸಾರ ಮಾಡುವುದರ ಮೂಲಕ ಜನರಲ್ಲಿ ವೈಚಾರಿಕತೆ ಮೂಡಿಸಬೇಕು ಹಾಗೂ ಹಸಿವಿಲ್ಲದ ಸಮ-ಸಮಾಜ ನಿರ್ಮಾಣ ಮಾಡಬೇಕು. ಆದರೆ ವಿಜ್ಞಾನದ ಆವಿಷ್ಕಾರಗಳನ್ನೇ ಮೌಢ್ಯ ಬಿತ್ತುವ ಸಲಕರಣೆ ಮಾಡಿಕೊಂಡು ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ಟಿ. ಗುರುರಾಜು, ಮೌಢ್ಯ ವಿರೋಧಿ ಆಂದೋಲನದ ಅಧ್ಯಕ್ಷರಾಗಿದ್ದ ದಾಬೋಲ್ಕರ್‌ ಹತ್ಯೆ ದಿನವಾದ ಆ. 20 ರಂದು ರಾಷ್ಟೀಯ ವೈಜ್ಞಾನಿಕ ಮನೋವೃತ್ತಿ ದಿನವನ್ನಾಗಿ ಆಚರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಡಾ. ಸಾವಿತ್ರಿ, ಅಹಮದ್ ಹಗರೆ ಅವರು ಪಿಪಿಟಿ ಮೂಲಕ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಮಮತಾ ಶಿವು ಸ್ವಾಗತಿಸಿದರು. ಉಪಾಧ್ಯಕ್ಷ ಬಿ.ಜಿ. ಗೋಪಾಲಕೃಷ್ಣ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !