ಜನಾಭಿಪ್ರಾಯ ಪಡೆದು ಟಿಕೆಟ್ ಹಂಚಿಕೆ

7
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ರೇವಣ್ಣ

ಜನಾಭಿಪ್ರಾಯ ಪಡೆದು ಟಿಕೆಟ್ ಹಂಚಿಕೆ

Published:
Updated:
Deccan Herald

ಹಾಸನ: ಜನಾಭಿಪ್ರಾಯ ಪಡೆದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ ಮಾಡಲಾಗುವುದು ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಹಾಸನದಲ್ಲಿ ಬಿಜೆಪಿ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಕಾರ್ಯಕರ್ತರು ಹೆದರಬೇಕಿಲ್ಲ. ಎಚ್‌.ಎಸ್‌.ಪ್ರಕಾಶ್‌ ಸೋತಿದ್ದರೂ ನಾನೇ ಕ್ಷೇತ್ರದ ಕೆಲಸ ಮಾಡುವೆ. ಕಳೆದ ಚುನಾವಣೆಯಲ್ಲಿ ಅಪಪ್ರಚಾರದಿಂದ ಅಲ್ಪಸಂಖ್ಯಾತರ ಮತಗಳು ಪಕ್ಷಕ್ಕೆ ದೊರೆಯಲಿಲ್ಲ. ರಸ್ತೆಗಳ ಅಭಿವೃದ್ಧಿಗೆ ₹ 50 ಕೋಟಿ ಟೆಂಡರ್‌ ಆಗಿದ್ದು, ಹಬೀಬಿಯಾ ಸಾ ಮಿಲ್‌ ರಸ್ತೆಗೆ ₹ 10 ಕೋಟಿ ಮೀಸಲಿಡಲಾಗಿದೆ. ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಬಿಜೆಪಿ ಶಾಸಕರು ಒಳ್ಳೆಯ ಕೆಲಸ ಮಾಡಲಿ. ಆದರೆ ಜೆಡಿಎಸ್‌ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಸುಮ್ಮನೆ ಇರುವುದಿಲ್ಲ’ ಎಂದು ಗುಡುಗಿದರು.

‘ಹನ್ನೇರಡು ವರ್ಷಗಳಿಂದ ಅಧಿಕಾರ ಇಲ್ಲದೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಕುಡಿಯುವ ನೀರಿಗೆ ಸಲ್ಲಿಸಿದ ₹ 850 ಕೋಟಿ ವೆಚ್ಚದ ಪ್ರಸ್ತಾವವನ್ನು ಯುಪಿಎ ಸರ್ಕಾರ ತಿರಸ್ಕರಿಸಿತು. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಸಂಸದ ದೇವೇಗೌಡ, ಸಿ.ಎಂ. ಕುಮಾರಸ್ವಾಮಿ ಜತೆ ಚರ್ಚಿಸಿ ಹಾಸನವನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ಸಾಲ ಮನ್ನಾದಿಂದ ಜಿಲ್ಲೆಯ 1.42 ಲಕ್ಷ ರೈತರಿಗೆ ಅನುಕೂಲವಾಗಲಿದೆ. ವಾರದಲ್ಲಿ ಸಾಲ ಮನ್ನಾ ಆದೇಶ ಪತ್ರ ನೀಡಲಾಗುವುದು ಎಂದರು.

ಹಿರಿಯ ಮುಖಂಡ ಪಟೇಲ್‌ ಶಿವರಾಂ ಮಾತನಾಡಿ, ‘ಒಂದೊಂದು ವಾರ್ಡ್‌ನಲ್ಲಿ 4–5 ಜನರು ಆಕಾಂಕ್ಷಿಗಳು ಇದ್ದಾರೆ. ಹಿರಿಯರು ಒಟ್ಟಾಗಿ ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಒಳಿತು. ಇಲ್ಲವಾದರೆ ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.

ಇದೇ ವೇಳೆ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಶಿವಕುಮಾರ್, ನಗರಸಭೆ ಮಾಜಿ ಸದ್ಯಸ್ಯೆ ಆಶಾ ಬಾಹುಬಲಿ, ಮುಖಂಡ ಸುದರ್ಶನ ಅವರು ರೇವಣ್ಣ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಯಾದರು.

ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಗೌಡ ಸ್ವಾಗತಿಸಿದರು. ಸಭೆಯಲ್ಲಿ ಮುಖಂಡರಾದ ರಾಜೇಗೌಡ, ಜಯರಾಮ್‌, ಚನ್ನೇಗೌಡ, ಸತ್ಯನಾರಾಯಣ, ಮಹಾಂತಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಸ್ವರೂಪ್‌, ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್‌ ಯಜಮಾನ್‌ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !