ಜನಪ್ರತಿನಿಧಿಗಳು ಭ್ರಷ್ಟರಾಗಲು ನಾಗರಿಕರೇ ಕಾರಣ: ಎನ್.ಸಂತೋಷ್ ಹೆಗ್ಡೆ ಬೇಸರ

7

ಜನಪ್ರತಿನಿಧಿಗಳು ಭ್ರಷ್ಟರಾಗಲು ನಾಗರಿಕರೇ ಕಾರಣ: ಎನ್.ಸಂತೋಷ್ ಹೆಗ್ಡೆ ಬೇಸರ

Published:
Updated:
Deccan Herald

ಹಾಸನ : ‘ಜನಪ್ರತಿನಿಧಿಗಳು ಭ್ರಷ್ಟರಾಗಲು ನಾಗರಿಕರೇ ಮುಖ್ಯ ಕಾರಣ. ಕೋಟ್ಯಂತರ ರೂಪಾಯಿ ಲಪಟಾಯಿಸಿ ಜೈಲಿನಿಂದ ಬಿಡುಗಡೆಯಾಗುವ ವ್ಯಕ್ತಿಗೆ ಹಾರ ಹಾಕಿ ಸ್ವಾಗತಿಸುವ ಜನರಿದ್ದಾರೆ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ವಕೀಲರ ಸಂಘದ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿದರು.

‘ವಕೀಲ ವೃತ್ತಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನನಗೆ ಸಮಾಜದಲ್ಲಿ ಭ್ರಷ್ಟಾಚಾರ ವಿಪರೀತವಾಗಿದೆ ಎಂಬ ಅರಿವು ಲೋಕಾಯುಕ್ತಕ್ಕೆ ಬಂದ ತಿಳಿಯಿತು. ಅಲ್ಲಿವರೆಗೆ ನಾನು ಬಾವಿಯೊಳಗಿನ ಕಪ್ಪೆಯಾಗಿದ್ದೆ. ಲೋಕಾಯುಕ್ತಕ್ಕೆ ನೇಮಕವಾದ ಬಳಿಕ ಸರ್ಕಾರ, ಸಮಾಜ, ಸಾಮಾನ್ಯ ಜನರು ಹೇಗೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಕರಾಳ ಸತ್ಯ ಅರಿವಿಗೆ ಬಂತು’ ಎಂದು ಹೇಳಿದರು.

‘ಅಕ್ರಮ ಗಣಿಗಾರಿಕೆ ಸಂಬಂಧ ಮೂರು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಈ ಪ್ರಕರಣದಲ್ಲಿ ಅನೇಕರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ, ತಪ್ಪಿತಸ್ಥರಿಗೆ ಈಗ ನೀಡುತ್ತಿರುವುದು ಶಿಕ್ಷೆಯಲ್ಲ ಬದಲಾಗಿ ರಾಜಾತಿಥ್ಯ’ ಎಂದು ಟೀಕಿಸಿದರು.

‘ದೇಶದ ಅಭಿವೃದ್ಧಿಗಾಗಿ ಯಾವುದಾದರೊಂದು ಕಾನೂನು ಅನುಷ್ಠಾನಗೊಳ್ಳುವಾಗ ಪರಸ್ಪರ ಜಗಳ ಮಾಡುವ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರು ತಮ್ಮ ಸಂಬಳ ಏರಿಕೆ ಮಾಡಿಕೊಳ್ಳುವಾಗ ಸಹಮತ ಸೂಚಿಸುತ್ತಾರೆ. ಇದುವರೆಗೆ 1139 ಶಾಲೆಗಳಿಗೆ ಭೇಟಿ ನೀಡಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಭಾಷಣ ಮಾಡಿದ್ದೇನೆ. ನನ್ನ ಭಾಷಣದಿಂದ ಸಮಾಜ ಬದಲಾಗುತ್ತದೆ, ಲಂಚಾವತಾರ ಕೊನೆಗೊಳ್ಳುತ್ತದೆ ಎಂಬ ವಿಶ್ವಾಸ ನನಗಿಲ್ಲ. ಆದರೆ, ಮುಂದಿನ ಪೀಳಿಗೆಯು ಹಿರಿಯರನ್ನು ಬೈಯಬಾರದು’ ಎಂದು ನುಡಿದರು.

‘ 50 ವರ್ಷದ ಹಿಂದೆ ನಡೆದ ಹಗರಣವೊಂದರಿಂದ ₹ 52 ಲಕ್ಷ ನಷ್ಟವಾಯಿತು. ಈ ಹಗರಣದ ಬಳಿಕ ಕಾನೂನು, ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಎಚ್ಚೆತ್ತು ಅದಕ್ಕೆ ಕಡಿವಾಣ ಹಾಕಿದ್ದರೇ ಪರಿಸ್ಥಿತಿ ಬದಲಾಗುತ್ತಿತ್ತು. ದಿನಕಳೆದಂತೆ ಹಗರಣದ ಮೊತ್ತದ ಮೌಲ್ಯ ಹೆಚ್ಚಾಯಿತೆ ಹೊರತು ಕಡಿಮೆಯಾಗಲಿಲ್ಲ’ ಎಂದರು.

‘2012 ರಲ್ಲಿ ಹಗರಣವೊಂದರ ಮೊತ್ತ ₹ 1.86 ಸಾವಿರ ಕೋಟಿ. ಅಂದರೆ ಕರ್ನಾಟದ ಬಜೆಟ್ ನ ಗಾತ್ರದ್ದಾಗಿದೆ. ಒಂದು ರಾಜ್ಯದ ಅಭಿವೃದ್ಧಿಗೆ ಬಳಸಬಹುದಾದಷ್ಟು ಅನುದಾನವನ್ನು ಕೆಲವೇ ವ್ಯಕ್ತಿಗಳು ಕಬಳಿಸುತ್ತಾರೆಂದರೆ ಏನರ್ಥ?’ ಎಂದು ವಿಷಾದ ವ್ಯಕ್ತಪಡಿಸಿದರು.

‘ನ್ಯಾಯಾಲಯಗಳು ಯಾವುದೇ ವ್ಯಾಜ್ಯಕ್ಕೆ ಸಂಬಂಧಿಸಿದ ತೀರ್ಪನ್ನು ವರ್ಷಾನುಗಟ್ಟಲೇ ಮುಂದೂಡುವುದು ಸರಿಯಲ್ಲ. ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ವರಗೆ ಒಂದು ಪ್ರಕರಣದ ವಿಚಾರಣೆ ನಡೆದಿದೆ ಎಂದರೆ ಸುಮಾರು 60 ವರ್ಷ ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ಆರೋಪಿಯ ಆಯುಷ್ಯ ಮುಗಿದಿರುತ್ತದೆ ಹಾಗೂ ಪಿರ್ಯಾದಿಯು ಸೋತು ಸುಣ್ಣವಾಗಿರುತ್ತಾನೆ. ಪ್ರಕರಣದ ವಿಚಾರಣೆ ಬಹಳ ದಿನಗಳ ವರೆಗೆ ನಡೆದರೆ ಸಾರ್ವಜನಿಕರು ನ್ಯಾಯಾಂಗವನ್ನು ಸಂಶಯದಿಂದ ನೋಡುತ್ತಾರೆ’ ಎಂದು ಎಚ್ಚರಿಸಿದರು. 

ಜಿಲ್ಲಾ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್, ಹಿರಿಯ ವಕೀಲ ಎಚ್.ಪಿ.ನಾಗೇಂದ್ರಯ್ಯ, ವಕೀಲರ ಸಂಘದ ಅಧ್ಯಕ್ಷ ಎಂ.ಡಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೆ.ಧರಣಿ, ಜಿ.ಎಲ್.ಲೋಹಿತ್, ಎ.ಜಿ.ಭಾಗ್ಯ, ಚಂದ್ರಶೇಖರ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !