ಸೋಮವಾರ, ಡಿಸೆಂಬರ್ 9, 2019
°C
ಮಕ್ಕಳ ಸಂಸತ್‌ ಕಾರ್ಯಕ್ರಮದಲ್ಲಿ ಪ್ರಶ್ನೆಗಳ ಸುರಿಮಳೆ

ಜೀವ ಭಯದಲ್ಲಿ ಪಾಠ ಕೇಳಬೇಕು..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಶಾಲೆಗೆ ಹೋಗುವ ರಸ್ತೆ ಕಿರಿದಾಗಿದೆ, ಮಳೆ ಬಂದರೆ ಗಲೀಜು ನೀರು ಶಾಲೆಗೆ ನುಗ್ಗುತ್ತದೆ, ಶಾಲೆ ಬಳಿ ಸಾರ್ವಜನಿಕರು ಕಸ ಹಾಕುವುದರಿಂದ ಕೆಟ್ಟ ವಾಸನೆ ಜತೆಗೆ ಸೊಳ್ಳೆಗಳ ಕಾಟ, 250 ಮಕ್ಕಳಿಗೆ ಎರಡೇ ಶೌಚಾಲಯ. ಮಳೆ ಬಂದರೆ ನೀರು ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಇಲಿ, ಹಾವು ಚೇಳುಗಳು ಒಳ ಬರುತ್ತಿವೆ. ಜೀವ ಭಯದಲ್ಲಿ ಪಾಠ ಕೇಳಬೇಕು..

ಮಕ್ಕಳ ಈ ಪ್ರಶ್ನೆಗಳಿಗೆ ತಬ್ಬಿಬ್ಬಾದವರು ಅಧಿಕಾರಿಗಳು. ಮಕ್ಕಳ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿ ವರ್ಗ, ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿ ವಿದ್ಯಾರ್ಥಿ ಪ್ರತಿನಿಧಿಗಳ ಮೊಗದಲ್ಲಿ ಸಂತಸ ಮೂಡಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗ್ರಾಸ್‌ ರೂಟ್ಸ್‌ ರಿಸರ್ಚ್‌ ಆ್ಯಂಡ್‌ ಅಡ್ವೊಕಸಿ ಮೂವ್‌ಮೆಂಟ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸಂಸತ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ 12 ಸರ್ಕಾರಿ ಶಾಲೆಗಳಿಂದ 100 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಕಾರಾತ್ಮಕವಾಗಿ ಚರ್ಚಿಸುವ ಮೂಲಕ ಪರಿಹಾರೋಪಾಯಗಳನ್ನು ಕಂಡುಕೊಂಡರು.

ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಂತೆ ಸದನದಲ್ಲಿ ವಾದ ಮಂಡಿಸಿದರು.  ಸಿದ್ಧಯ್ಯ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಹಂಸವೇಣಿ ಸಭಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದರು. ಸಭಾಧ್ಯಕ್ಷರು ಕಾರ್ಯಕಲಾಪ ಆರಂಭಿಸಿದರು. ಸಂತಾಪ ಸೂಚನೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ ಹೀಗೆ ವಿಧಾನಸಭೆ ಹಾಗೂ ಸಂಸತ್‌ನಲ್ಲಿ ನಡೆಯುವ ಕಲಾಪವನ್ನೇ ಮರು ಸೃಷ್ಟಿಸಿದರು.

ಸಭೆಯಲ್ಲಿ ದೇವೆಗೌಡ ನಗರ, ವಾಣಿ ವಿಲಾಸ, ಶಾಂತಿಗ್ರಾಮ, ಸಿದ್ಧಯ್ಯ ನಗರ, ಬಿ. ಕಾಟೀಹಳ್ಳಿ, ಬುವನಹಳ್ಳಿ, ನಿಟ್ಟೂರು, ದಾಸರಕೊಪ್ಪಲು ಸೇರಿದಂತೆ ಇತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ಸಂಸತ್ತಿನ ಪ್ರತಿನಿಧಿಗಳಾಗಿದ್ದರು.

ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಅವ್ಯವಸ್ಥೆ, ನೀರಿನ ಕೊರತೆ, ಪಠ್ಯ ಪುಸ್ತಕ, ಶೂ ತಲುಪದಿರುವುದು, ಕ್ರೀಡಾಪಟುಗಳಿಗೆ ತರಬೇತಿ ಕೊರತೆ, ಆರೋಗ್ಯ ತಪಾಸಣೆ ಮಾಡದಿರುವುದು, ಹೀಗೆ ಅನೇಕ ವಿಷಯಗಳನ್ನು ಮಕ್ಕಳು ಪ್ರಶ್ನಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೇಷನ್ಸ್‌ ನ್ಯಾಯಾಧೀಶ ಶಿವಣ್ಣ, ಶಾಲಾ ಹಂತದಲ್ಲಿ ನಾಯಕತ್ವದ ಗುಣ ಮೈಗೂಡಿಸಿಕೊಂಡು ಸಮಾಜದ ಆಸ್ತಿಗಳಾಗಿ ರೂಪುಗೊಳ್ಳಬೇಕು. ಕೇವಲ ಅಂಕಗಳಿಗೆ ಅಥವಾ ಉತ್ತೀರ್ಣರಾಗುವುದಕಷ್ಟೇ ಕಲಿಕೆಯನ್ನು ಮಂತ್ರದಂಡವನ್ನಾಗಿಸಿಕೊಳ್ಳದೆ ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್, ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿ ಶಾಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಪರಿಹಾರೋಪಾಯ ಕಂಡುಕೊಳ್ಳುವಂತೆ ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮೈಸೂರಿನ ಗ್ರಾಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಬಸವರಾಜು, ಪ್ರತಿ ಶಾಲೆಯಲ್ಲಿಯೂ ಮಾದರಿ ಚುನಾವಣೆ ನಡೆಸಿ ಮಕ್ಕಳ ಸಂಸತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಯಶವಂತ್, ಡಯಟ್ ಪ್ರಾಂಶುಪಾಲ ಪುಟ್ಟರಾಜು, ತಹಶೀಲ್ದಾರ್ ಮೇಘನ, ಡಿ.ವೈ.ಎಸ್.ಪಿ. ಪುಟ್ಟಸ್ವಾಮಿ ಗೌಡ, ವಕೀಲರ ಸಂಘದ ಅಧ್ಯಕ್ಷ ಜೆ.ಪಿ. ಶೇಖರ್, ಆರೋಗ್ಯ ಇಲಾಖೆ ಮೇಲ್ವೀಚಾರಕರಾದ ಶಿವಣ್ಣ, ವಿಷಯ ಪರಿವೀಕ್ಷಕ ಕಾಂತರಾಜು, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ವಿಜಯ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)