ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಜಲ ಪೋಲು ಮಾಡದಿರಲು ಸಲಹೆ

ತಿರುಪತಿಹಳ್ಳಿ ಬೆಟ್ಟದ ತಪ್ಪಲಿನಲ್ಲಿ 450 ಸಸಿಗಳ ನೆಡುವಿಕೆ
Last Updated 16 ಜೂನ್ 2019, 14:16 IST
ಅಕ್ಷರ ಗಾತ್ರ

ಹಾಸನ: ಊರಿಗೊಂದು ಶಾಲೆ, ಊರಿಗೊಂದು ವನ ಇರಬೇಕು. ಏಕೆಂದರೆ ಒಂದು ಕಲಿಸಲು, ಮತ್ತೊಂದು ಉಳಿಸಲು ಎಂದು ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್‌ ಹೇಳಿದರು.

ಹಸಿರು ಭೂಮಿ ಬಳಗದ ವತಿಯಿಂದ ತಾಲ್ಲೂಕಿನ ತಿರುಪತಿಹಳ್ಳಿಯಲ್ಲಿ ಏರ್ಪಡಿಸಿದ್ದ ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಲು ಮರದ ತಿಮ್ಮಕ್ಕ ಶಾಲೆಗೆ ಹೋಗಲಿಲ್ಲ. ಗಿಡ, ಮರಗಳನ್ನೇ ಮಕ್ಕಳೆಂದು ತಿಳಿದು ನೀರು ಹಾಕಿ ಬೆಳೆಸಿದರು. ಎರಡು ಸಾವಿರ ವರ್ಷಗಳ ಹಿಂದೆ ಅಶೋಕ ಚಕ್ರವರ್ತಿ ಸಹ ರಸ್ತೆ ಬದಿ ಮರಗಳನ್ನು ಬೆಳೆಸಿದ್ದ. ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಪರಿಸರ ಪ್ರೀತಿಸಲು ಪಿಎಚ್‌.ಡಿ ಪಡೆಯುವ ಅವಶ್ಯತೆ ಇಲ್ಲ. ಇಂದಿನ ಮಕ್ಕಳಿಗೆ ಸಮಾಜ ವಿಜ್ಞಾನದ ಅರಿವು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆ, ನೆಲ, ಜಲ ಸಂರಕ್ಷಣೆಯಾಗಬೇಕು. ಜೀವ ಜಲ ಪೋಲು ಮಾಡಬಾರದು. ಗಿಡ, ಮರಗಳು ಇಲ್ಲದೆ ಮಳೆಯಾಗುತ್ತಿಲ್ಲ. ಶುದ್ಧವಾದ ಗಾಳಿಯೂ ಸಿಗುವುದಿಲ್ಲ. ಸಸಿಗಳನ್ನು ನೆಟ್ಟ ಮಾತ್ರಕ್ಕೆ ಸುಮ್ಮನಾಗಬಾರದು. ಅವುಗಳಿಗೆ ನೀರು ಹಾಕಿ ಪೋಷಣೆ ಮಾಡಬೇಕು. ಪ್ರತಿ ಮಕ್ಕಳಿಗೂ ಸಸಿಗಳನ್ನು ದತ್ತು ನೀಡುವಂತೆ ಶಾಲೆಯ ಮುಖ್ಯ ಶಿಕ್ಷಕ ಗುಣೇಶ್‌ ಅವರಿಗೆ ನಾಗರಾಜ್‌ ಅವರು ಸಲಹೆ ನೀಡಿದರು.

ಪ್ರತಿಷ್ಠಾನದ ವತಿಯಿಂದ 12 ಕೆರೆ, 24 ಕಲ್ಯಾಣಿ, 20 ಸಾವಿರ ಗಿಡಗಳನ್ನು ನೆಡಲಾಗಿದೆ. ನಾವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕೆರೆ, ಕಲ್ಯಾಣಿಗಳ ಜೀರ್ಣೋದ್ಧಾರಕ್ಕೆ ಸಂಘ, ಸಂಸ್ಥೆಗಳ ಜತೆ ಗ್ರಾಮಸ್ಥರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಬಳಗದ ಸದಸ್ಯರು, ಸರ್ಕಾರಿ ಶಾಲೆ ಮಕ್ಕಳು, ಭಾರತ ಸೇವಾ ದಳ ಹಾಗೂ ಗ್ರಾಮಸ್ಥರು ಸೇರಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ನೇರಳೆ, ಹಲಸು, ಹುಣಸೆ, ಅರಳಿ, ಬೇವು, ಹತ್ತಿ ಸೇರಿದಂತೆ 450 ಸಸಿಗಳನ್ನು ನೆಟ್ಟರು. ಸಸಿಗಳನ್ನು ಜಾನುವಾರುಗಳಿಂದ ರಕ್ಷಿಸಲು ಸುತ್ತಲೂ ಬೇಲಿಯನ್ನೂ ನಿರ್ಮಿಸಿದರು. ಆವರಣದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್‌ ತಟ್ಟೆ, ಲೋಟ, ಚೀಲಗಳನ್ನು ತೆಗೆದು ಚೀಲದಲ್ಲಿ ತುಂಬಿ ಬೇರೆಡೆಗೆ ಸಾಗಿಸಲಾಯಿತು.

ಶ್ರಮದಾನದಲ್ಲಿ ಪಾಲ್ಗೊಂಡಿದ್ದವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು. ಇದೇ ವೇಳೆ ಗ್ರಾಮ ಸ್ವರಾಜ್‌ ರಚಿಸ‌ಲಾಯಿತು. ಅಧ್ಯಕ್ಷರಾಗಿ ಕುಮಾರ್‌, ಉಪಾಧ್ಯಕ್ಷರಾಗಿ ವೆಂಕಟೇಶ್‌, ಕಾರ್ಯದರ್ಶಿಯಾಗಿ ರಮೇಶ್‌, ಖಜಾಂಚಿಯಾಗಿ ಉಮೇಶ್‌ ಅವರನ್ನು ನೇಮಿಸಿ, ಸಸಿಗಳ ಪೋಷಣೆ, ಕೆರೆ, ಕಲ್ಯಾಣಿ ಅಭಿವೃದ್ಧಿ ಜವಾಬ್ದಾರಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಬಳಗದ ಸುಬ್ಬಸ್ವಾಮಿ, ಪುಟ್ಟೇಗೌಡ, ಶಿವಶಂಕರಪ್ಪ, ರಾಜಿವೇಗೌಡ, ಬಿ.ಎಸ್.ದೇಸಾಯಿ, ಚಿನ್ನಸ್ವಾಮಿ, ಭಾರತ ಸೇವಾ ದಳದ ಸಂಘಟಕಿ ರಾಣಿ, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್‌, ಶಿಕ್ಷಕರಾದ ಗಿರಿಜಾ, ಮಮತಾ, ಗ್ರಾಮಸ್ಥರಾದ ಕುಮಾರ್ ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT