ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ಮತ ಎಣಿಕೆ ನಡೆವ ನಂಬಿಕೆ ಇಲ್ಲ; ಚುನಾವಣಾಧಿಕಾರಿ ವರ್ಗಾವಣೆ ಮಾಡಿ–ರೇವಣ್ಣ

ಡಿಸಿ ದಾಖಲೆ ತಿದ್ದುವ ಸಾಧ್ಯತೆ ಇದೆ: ಸಚಿವ ಆರೋಪ
Last Updated 2 ಮೇ 2019, 15:27 IST
ಅಕ್ಷರ ಗಾತ್ರ

ಹಾಸನ: ‘ಬಿಜೆಪಿ ಪಕ್ಷದ ಏಜೆಂಟ್‌ ರೀತಿ ನಡೆದುಕೊಳ್ಳುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರಿಂದ ಪಾರದರ್ಶಕವಾಗಿ ಮತ ಎಣಿಕೆ ಕಾರ್ಯ ನಡೆಯುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಪ್ರಿಯಾಂಕ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಸಚಿವ ಎಚ್‌.ಡಿ.ರೇವಣ್ಣ ಅವರು ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

‘ಪ್ರಿಯಾಂಕ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವರ್ಗಾವಣೆಗೊಂಡಿರುವ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿ, ಮಾರ್ಗದರ್ಶನ ಪಡೆದಿದ್ದಾರೆ. ಅವರನ್ನು ತಮ್ಮ ಮನೆಯಲ್ಲಿಯೇ ಎರಡು ದಿನ ಇರಿಸಿಕೊಕೊಂಡಿದ್ದರು. ಇದಕ್ಕೆ ಆಯೋಗ ಅನುಮತಿ ಪಡೆದಿದ್ದರೇ? ಡಿಸಿ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ನಡೆದಿರುವ ಎಲ್ಲ ಘಟನೆಗಳ ಬಗ್ಗೆ ತನಿಖೆಯಾಗಲಿ’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಏಜೆಂಟರು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದೂರು ನೀಡಬಹುದಿತ್ತು. ಆಗ ಯಾವುದೇ ದೂರು ನೀಡದವರು ನಂತರ ದೂರು ನೀಡಲು ಕಾರಣ ಏನು? ಮತದಾನ ನಡೆದು ಆರು ದಿನಗಳ ಬಳಿಕ ದೂರು ನೀಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಒತ್ತಡ ಹೇರಿ, ಇದೇ ರೀತಿ ದೂರು ನೀಡುವಂತೆ ಬಿಜೆಪಿಗೆ ಹೇಳಿ ಬರೆಸಿದ್ದಾರೆ’ ಎಂದು ದೂರಿದರು.

‘ಹೊಳೆನರಸೀಪುರದಲ್ಲಿ ತಮ್ಮ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ ಅವರು ನೋಡಲ್‌ ಅಧಿಕಾರಿಯಾಗಿದ್ದ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪ್ರಿಯಾಂಗ ಅವರಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿ, ಪ್ರಕರಣ ದಾಖಲಿಸುವಂತೆ ಒತ್ತಡ ಹೇರಿದ್ದಾರೆ. ರಾತ್ರಿ 12.45ರಲ್ಲಿ ಘಟನೆ ನಡೆದಿದೆ. ಆದರೆ ಬೆಳಿಗ್ಗೆ 6 ಗಂಟೆಗೆ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ತಾವು ಹೇಳಿದ ವಾಹನಗಳ ಮೇಲೆ ಕೇಸ್‌ ಹಾಕುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮೇಲೂ ಒತ್ತಡ ಹೇರಿದ ಪರಿಣಾಮ, ಅವರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಿಯಾಂಕ ಅವರು ದಾಖಲೆ ತಿದ್ದುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರ ಜತೆ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ತಕ್ಷಣ ಅವರನ್ನು ವರ್ಗಾವಣೆ ಮಾಡುವಂತೆ ಪತ್ರ ಬರೆಯಲಾಗುವುದು’ ಎಂದು ಹೇಳಿದರು.

‘ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244 ರಲ್ಲಿ ನಕಲಿ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಬೂತ್‌ ಏಜೆಂಟರು ಆರೋಪಿಸಿದ್ದಾರೆ. ದೂರುದಾರರ ಸಮ್ಮುಖದಲ್ಲಿ ಪ್ರಿಯಾಂಕ ಅವರು ತಮ್ಮ ಕಚೇರಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ತರಿಸಿಕೊಂಡು ಕೂಲಂಕಷ ಅವಲೋಕನ ಮಾಡಿದ್ದಾರೆ. ಅದೇ ರೀತಿ ನಮ್ಮ ಪಕ್ಷದವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಬೇಕಿತ್ತು. ಆ ರೀತಿ ಮಾಡದೇ ಏಕ ಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಮತಗಟ್ಟೆಗೆಯೊಳಗೆ ಹತ್ತು ನಿಮಿಷ ನನ್ನ ಪತ್ನಿಗಾಗಿ ಕಾದು ನಿಂತೆ. ನಕಲಿ ಮತದಾನ ಮಾಡಿಸಿಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ದೂರು ನೀಡಿರುವ ಬೂತ್‌ ಏಜೆಂಟ್‌ಗಳಾದ ರಾಜು ಮತ್ತು ಮಾಯಣ್ಣ ಅವರು ಸ್ಥಳೀಯರಲ್ಲ. ಸ್ಥಳೀಯರಲ್ಲದವರಿಂದ ನಕಲಿ ಮತದಾನ ಮಾಡಿರುವವರು ಯಾರು ಎಂದು ಗುರುತಿಸಲು ಹೇಗೆ ಸಾಧ್ಯ? ನನ್ನ ಹೆಸರಿಗೆ ಕಪ್ಪು ಚುಕ್ಕಿ ತರಲು ಈ ರೀತಿ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT