ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಸಮವಾಗಿದ್ದ ಬೆಳೆ: ತೆನೆಯಲ್ಲೇ ಮೊಳಕೆ

ಆಲೂರು ತಾಲ್ಲೂಕಿನ ವಿವಿಧೆಡೆ ಮಳೆಯಿಂದಾಗಿ ನೆಲಕಚ್ಚಿದ್ದ ಜೋಳ ಗಿಡಗಳು: ರೈತರಿಗೆ ನಷ್ಟ
Last Updated 27 ಸೆಪ್ಟೆಂಬರ್ 2020, 3:09 IST
ಅಕ್ಷರ ಗಾತ್ರ

ಆಲೂರು: ಒಂದು ತಿಂಗಳ ಹಿಂದೆ ಬಿದ್ದ ಭಾರಿ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ನೆಲಸಮಗೊಂಡಿದ್ದ ಮುಸುಕಿನ ಜೋಳದ ತೆನೆ ಮೊಳಕೆಯೊಡಿದಿದ್ದು, ಪ್ರಯೋಜನಕ್ಕೆ ಬಾರದಂತಾಗಿದೆ. ಒಂದೂವರೆ ತಿಂಗಳ ಬೆಳೆಯ ಕಾಂಡ ಮುರಿದಿದ್ದರಿಂದ ಕಾರಣ ಮೇಲೆತ್ತಲು ಸಾಧ್ಯವಾಗಿಲ್ಲ.

ಆಗಾಗ ಮಳೆಯಾದ ಕಾರಣ ಭೂಮಿಗೆ ತಾಗಿಕೊಂಡಿದ್ದ ಜೋಳ ಶೀತ ವಾತಾವರಣದಿಂದ ಮೊಳಕೆಯೊಡೆಯಿತು. ಮೊಳಕೆ ಒಡೆದಿರುವುದರಿಂದ ದಿಂಡಿನಿಂದ ಬಿಡಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಹೊಲದಲ್ಲೇ ಬಿಟ್ಟು ಉಳುಮೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡನೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಒಂದು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲು ಉಳುಮೆ, ಗೊಬ್ಬರ, ಬಿತ್ತನೆ ಬೀಜ ಸೇರಿ ಸುಮಾರು ಹತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಎಲ್ಲ ನೆಲ ಕಚ್ಚಿರುವುದರಿಂದ ಕಷ್ಟಪಟ್ಟು ಗಿಡ ಮೇಲೆತ್ತಿ ಬಿಡಿಸಿದರೂ 2 ಕ್ವಿಂಟಲ್ ಜೋಳ ಸಿಗುವುದಿಲ್ಲ. ಜಾನುವಾರುಗಳಿಗೆ ಉಪಯೋಗಿಸಲೂ ಆಗುವುದಿಲ್ಲ. ಈ ನಷ್ಟವನ್ನು ಸರ್ಕಾರ ಕೂಡಲೇ ಪರಿಹಾರ ಮೊತ್ತ ವಿತರಿಸಬೇಕು ಎಂದು ನಾಕಲಗೂಡು ಕೊಪ್ಪಲು ಗ್ರಾಮದ ಪ್ರಭಾವತಿ ಒತ್ತಾಯಿಸಿದರು.

ವಾಣಿಜ್ಯ ಬೆಳೆಗಳಾದ ಶುಂಠಿ, ಆಲೂಗಡ್ಡೆ ಬೆಳೆಯೂ ರೋಗಮುಕ್ತವಾಗಿಲ್ಲ. ಈ ಕಾರಣದಿಂದ ನಾಲ್ಕಾರು ವರ್ಷಗಳಿಂದೀಚೆಗೆ ಮುಸುಕಿನ ಜೋಳ ಬೆಳೆಯಲಾರಂಬಿಸಿದೆವು. ಇದಕ್ಕೆ ರೋಗ ತಗುಲಿದರೂ ಪರವಾಗಿಲ್ಲ. ಆದರೆ ಎಳೆಯದರಲ್ಲೇ ಪ್ರಕೃತಿ ವಿಕೋಪಕ್ಕೆ ಸಿಲುಕಿ ನೆಲಸಮವಾಯಿತು. ರೈತರಿಗೆ ವರ್ಷದ ಆರಂಭದ ವಾಣಿಜ್ಯ ಬೆಳೆ ನಾಶವಾದರೆ ಬದುಕು ಅತಂತ್ರವಾಗುತ್ತದೆ. ಎರಡನೇ ಬೆಳೆ ಬೆಳೆಯಲೂ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಜೀವನ್ ಕುಂಬಾರಹಳ್ಳಿ ಕೊಪ್ಪಲು.

ತಾಲ್ಲೂಕಿನಲ್ಲಿ ಸುಮಾರು 1000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನ ಜೋಳ ಇತ್ತೀಚೆಗಿನ ಮಳೆಯಿಂದ ನೆಲಸಮಗೊಂಡಿದೆ. ಸಂಬಂಧಿಸಿದ ರೈತರು ಕಂದಾಯ ಇಲಾಖೆಗೆ ಅರ್ಜಿ ಕೊಟ್ಟಿದ್ದಾರೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ
ಸಮೀಕ್ಷೆ ನಡೆಸಿ ಪರಿಹಾರ ಆ್ಯಪ್‍ಗೆ ಅಪ್‍ಲೋಡ್ ಮಾಡಲಾಗಿದೆ. ಪರಿಹಾರದ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ
ಸಹಾಯಕ ನಿರ್ದೇಶಕ ತಮ್ಮಣ್ಣಗೌಡ ಪಾಟೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT