ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ

ಯೋಜನೆಗೆ ಜಮೀನು ಕಳೆದುಕೊಂಡವರ ಮಕ್ಕಳಿಗೆ ಆದ್ಯತೆ: ಸಚಿವ ರೇವಣ್ಣ
Last Updated 27 ಜೂನ್ 2019, 17:20 IST
ಅಕ್ಷರ ಗಾತ್ರ

ಹಾಸನ: ನಗರದ ಕೈಗಾರಿಕಾ ಬಡಾವಣೆ ಯೋಜನೆಗೆ ಜಮೀನು ಕಳೆದುಕೊಂಡವರ ಮಕ್ಕಳಿಗೆ ಆದ್ಯತೆ ಮೇಲೆ ಉದ್ಯೋಗ ನೀಡಬೇಕು ಎಂದು ಸಚಿವ ಎಚ್.ಡಿ. ರೇವಣ್ಣ ಅವರು ಸೂಚನೆ ನೀಡಿದರು.

ನಗರದಲ್ಲಿ ಮುಂದಿನ ತಿಂಗಳು ನಡೆಸಲು ಉದ್ದೇಶಿಸಿರುವ ಬೃಹತ್ ಉದ್ಯೋಗ ಮೇಳಕ್ಕೆ ಪೂರಕವಾಗಿ ಎಲ್ಲಾ ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು, ಜಿಲ್ಲೆಯ ಜನರಿಗೆ ಗರಿಷ್ಠ ಉದ್ಯೋಗಾವಕಾಶ ಕಲ್ಪಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಕೈಗಾರಿಕಾ ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ನೂರಾರು ಮಂದಿ ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಅವರ ಕುಟುಂಬ ವರ್ಗದವರಿಗೆ ಶೈಕ್ಷಣಿಕ ಅರ್ಹತೆಗೆ ಆಧಾರದಲ್ಲಿ ಲಭ್ಯವಿರುವ ಖಾಲಿ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು.

ಹಿಮತ್‍ಸಿಂಗ್, ಜಾಕಿ, ಗೋಕುಲ್ ದಾಸ್ ಸೇರಿದಂತೆ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಜುಲೈ 7ರ ಒಳಗಾಗಿ ಎಲ್ಲಾ ಸಂಸ್ಥೆಗಳು ತಮ್ಮಲ್ಲಿ ನೇಮಕಾತಿಗೆ ಲಭ್ಯವಿರುವ ಹುದ್ದೆಗಳು, ವಿದ್ಯಾರ್ಹತೆ, ವೇತನ ವಿವರಗಳನ್ನು ಒದಗಿಸುವಂತೆ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ, ಕಾರ್ಮಿಕ ಅಧಿಕಾರಿ ಹಾಗೂ ಉದ್ಯೋಗ ವಿನಿಮಯ ಅಧಿಕಾರಿಗಳು ಎಲ್ಲಾ ಕೈಗಾರಿಕೆಗಳಿಗೆ ಭೇಟಿ ನೀಡಿ, ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಂಖ್ಯೆ ಹಾಗೂ ಸ್ಥಳೀಯರಿಗೆ ನೀಡಿರುವ ಅವಕಾಶಗಳು, ಸರ್ಕಾರದಿಂದ ಪಡೆದಿರುವ ಅನುದಾನ, ಯಾವ ಹೆಸರಿನಲ್ಲಿ ಯಾವ ಉದ್ದೇಶಕ್ಕೆ ಜಮೀನು ಪಡೆಯಲಾಗಿದೆ ಎಂಬುದನ್ನು ಗಮನಿಸಿ ವರದಿ ಸಲ್ಲಿಸುವಂತೆ ಸಚಿವರು ನಿರ್ದೇಶನ ನೀಡಿದರು.

ಎಲ್ಲಾ ಲಾಭದಾಯಕ ಖಾಸಗಿ ಸಂಸ್ಥೆಗಳು ಸಿ.ಎಸ್.ಆರ್ ನಿಧಿಯಡಿ ಸಮುದಾಯಭಿವೃದ್ಧಿ ಚಟುವಟಿಕೆ ಕೈಗೊಳ್ಳಲೇಬೇಕಿದೆ. ಈ ವರ್ಷದ ಅನುದಾನ ವಿವರಗಳನ್ನು ಕೂಡಲೇ ಒದಗಿಸಬೇಕು. ಅದನ್ನು ಒಟ್ಟಾರೆ ಹೇಗೆ ಸದ್ಬಳಕೆ ಮಾಡಬೇಕೆಂಬುದನ್ನು ನಂತರ ತಿಳಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಪ್ರತಿಯೊಂದು ಸಂಸ್ಥೆಯೂ ತಮ್ಮ ಸ್ವಯಂ ವಿವರ, ಸಾಮರ್ಥ್ಯ, ವಹಿವಾಟು, ಉದ್ಯೋಗಾವಕಾಶಗಳು, ಈ ಹಿಂದೆ ಮಾಡಿರುವ ಸಮುದಾಯ ಅಭಿವೃದ್ಧಿ ಚಟುವಟಿಕೆಗಳು, ನೀಡಬೇಕಾಗಿರುವ ಸಿ.ಎಸ್.ಆರ್. ಅನುದಾನ ಬಾಕಿ, ಈ ವರ್ಷದ ಲಭ್ಯ್ಯಅನುದಾನದ ಬಗ್ಗೆ ವಾರ್ಷಿಕ ಲೆಕ್ಕ ವಿವರಗಳೊಂದಿಗೆ ವಾರದೊಳಗೆ ಮಾಹಿತಿ ಸಲ್ಲಿಸುವಂತೆ ಹೇಳಿದರು.

ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಹೆಚ್ಚು ಉದ್ಯೋಗ ದೊರೆಯಬೇಕು. ಎಲ್ಲಾ ಕೈಗಾರಿಕೆಗಳು ಅದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಅಗತ್ಯವಿರುವ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಆಗಬೇಕಾಗಿರುವ ಸಮುದಾಯಾಭಿವೃದ್ಧಿ ಚಟುವಟಿಕೆಗಳ ಸಮಗ್ರ ಯೋಜನೆ ರೂಪಿಸಿ ಆದ್ಯತೆಗಳ ಪಟ್ಟಿ ಮಾಡಿ ಎಲ್ಲಾ ಕೈಗಾರಿಕೆಗಳ ಸಿ.ಎಸ್.ಆರ್.ನಿಧಿ ಒಟ್ಟುಗೂಡಿಸಿ ಯೋಜಿತವಾಗಿ ವೆಚ್ಚ ಮಾಡಬಹುದು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT