ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆಗೆ ಕಿರಿಯರ ಅಗತ್ಯತೆ ಇಲ್ಲ: ಎಚ್.ಎಂ. ವಿಶ್ವನಾಥ್ ಆರೋಪ

Last Updated 6 ಡಿಸೆಂಬರ್ 2021, 4:55 IST
ಅಕ್ಷರ ಗಾತ್ರ

ಅರಸೀಕೆರೆ: ‘ಕೇಂದ್ರದಲ್ಲಿ ರಾಜ್ಯಸಭೆ ರಾಜ್ಯದಲ್ಲಿ ವಿಧಾನ ಪರಿಷತ್ ಎರಡೂ ಹಿರಿಯರು, ಶಿಕ್ಷಣ ತಜ್ಞರು, ಚಿಂತಕರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುತ್ಸದ್ಧಿಗಳು ಪ್ರತಿನಿಧಿಸುವ ಸಭೆಗಳಾಗಿವೆ. ಈ ಸಭೆಗಳಿಗೆ ಹಿರಿಯರು ಮತ್ತು ಚಿಂತಕರು ಆಯ್ಕೆಯಾಗಿ ಹೋಗಬೇಕು. ಹಣದಿಂದ ಗೆಲ್ಲುತ್ತೇನೆ ಎಂಬ ಹಠದಿಂದ ತಮ್ಮ ಪುತ್ರ ಸೂರಜ್ ಅವರನ್ನು ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಸಿರುವುದು ಜಿಲ್ಲೆಯ ಜನತೆಗೆ ಮಾಡುತ್ತಿರುವ ಮೋಸ’ ಎಂದು ಬಿಜೆಪಿ ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಅಪ್ಪಟ ರೈತನಾಗಿದ್ದೇನೆ, ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಿರುವುದು ಹಿರಿಯರು ಮಾಜಿ ಪ್ರಧಾನಮಂತ್ರಿ ಎಂಬ ಹಿನ್ನೆಲೆಯಲ್ಲಿ. ಆದರೆ, ಸೂರಜ್ ರೇವಣ್ಣ ಅವರನ್ನು ಮೇಲ್ಮನೆಗೆ ಕಳುಹಿಸಲು ಯಾವ ನೈತಿಕತೆಯಿದೆ. ಹಿರಿಯರು ಹಾಗೂ ಚಿಂತಕರು ಎಂಬ ಅರ್ಹತೆ ಇದೆಯೇ?’ ಎಂದರು.

‘ಶಾಸಕ ಎಚ್.ಡಿ. ರೇವಣ್ಣ ತಮ್ಮ ಪುತ್ರ ಸೂರಜ್ ಅವರನ್ನು ವಿಧಾನ ಪರಿಷರ್‌ಗೆ ಅಭ್ಯರ್ಥಿಯನ್ನಾಗಿಸಿರುವುದರ ಹಿಂದಿನ ಮರ್ಮ ಏನು?, ಇನ್ನೂ ಎಷ್ಟು ವರ್ಷಗಳ ಕಾಲ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ನಡೆಯಬೇಕು?, ಜಿಲ್ಲೆಯ ಜೆಡಿಎಸ್ ಪಕ್ಷದಲ್ಲಿ ಬೇರೆ ಯಾರೂ ಮುಖಂಡರು ಹಾಗೂ ಕಾರ್ಯಕರ್ತರು ಇಲ್ಲವೇ?, ದೇವೇಗೌಡರ ಕುಟುಂಬದವರಷ್ಟೇ ಜೆಡಿಎಸ್ ಪಕ್ಷದಲ್ಲಿ ರಾಜಕೀಯವಾಗಿ ಬೆಳೆಯಬೇಕೇ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಭೇಟಿ ಮಾಡಿದ್ದೇನೆ, ಎಲ್ಲರೂ ಬಿಜೆಪಿ ಪರವಾಗಿದ್ದಾರೆ, ಜಿಲ್ಲೆಯಲ್ಲಿರುವ ಜೆಡಿಎಸ್ ಶಾಸಕರಲ್ಲೇ ಸೂರಜ್ ರೇವಣ್ಣ ಅವರನ್ನು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿರುವುದಕ್ಕೆ ವಿರೋಧವಿದೆ. ಜಿಲ್ಲೆಯಲ್ಲಿ ಬಿಜೆಪಿ ಜೆಡಿಎಸ್ ನಡುವೆ ಯಾವುದೇ ಒಳ ಒಪ್ಪಂದ ಆಗಿಲ್ಲ’ ಎಂದರು.

ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ‘ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ರಾಜಕಾರಣದ ಬಗ್ಗೆ ಜಿಲ್ಲೆಯ ಜನತೆಗೆ ಬೇಸರವಿದೆ, ಎಲ್ಲರೂ ಬದಲಾವಣೆ ಬಯಸಿದ್ದಾರೆ, ಬಿಜೆಪಿ ಸರ್ವಧರ್ಮ, ಜಾತಿ ಜನಾಂಗದವರ ಪರವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ರೈತರ ಪರ ಇದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಗೆಲುವು ಖಚಿತ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯವಿಕ್ರಮ್, ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಜಿ. ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT