ಬುಧವಾರ, ಆಗಸ್ಟ್ 17, 2022
25 °C
ಕನಕದಾಸರ ಜಯಂತ್ಯುತ್ಸವದಲ್ಲಿ ಶಾಸಕ ಪ್ರೀತಂ ಗೌಡ ಅಭಿಮತ

ಕನಕದಾಸರ ಆದರ್ಶ ಅನುಕರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಾಡು ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಆದರ್ಶಗಳು ಎಲ್ಲರಿಗೂ ಅನುಕರಣೀಯ ಎಂದು ಶಾಸಕ ಪ್ರೀತಂ ಜೆ ಗೌಡ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜನರ ಮನಸ್ಸುಗಳನ್ನು ಬದಲಿಸುತ್ತಾ ಸಮಾಜವನ್ನು ಸರಿದಾರಿಗೆ ತರಲು ಶ್ರಮಿಸಿದರು. ಅವರ ಜೀವನ ಹಾಗೂ ಸಾಹಿತ್ಯ ಎರಡೂ ಉತ್ತಮ ಮಾರ್ಗ ತೋರುತ್ತವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ನೀಡಿದ ಸಂದೇಶ
ಇಂದಿಗೂ ಪ್ರಸ್ತುತ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ ನಮ್ಮ ಮನಸ್ಥಿತಿಗಳು
ಬದಲಾವಣೆಯಾಗಬೇಕು. ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ಅವರು ತೋರಿಸಿದ್ದಾರೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಜನರು ಜಾಗೃತರಾಗಬೇಕು. ಅಂತರ ಪಾಲನೆ ಮೂಲಕ ಸೋಂಕಿನಿಂದ ದೂರ ಉಳಿಯಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಮಾತನಾಡಿ, ಕನಕದಾಸರು 16 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಹಾದಿ ತೋರಿದವರು. ಹುಟ್ಟಿನಲ್ಲಿ ಕೆಳ ವರ್ಗದಲ್ಲಿದ್ದರೂ, ನಂತರ ಜ್ಞಾನ ಸಂಪಾದಿಸಿ ಮನ ಪರಿವರ್ತನೆ ಗೊಂಡು ಭಕ್ತಿ ಮಾರ್ಗದಲ್ಲಿ ಸಾಗಿ ಸಮಾಜ ಸುಧಾರಣೆಗೆ ಪ್ರೇರಣೆಯಾದರು ಎಂದು ನುಡಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಸಮಾಜದಲ್ಲಿನ ಮೇಲು, ಕೀಳು ವ್ಯವಸ್ಥೆ ವಿರುದ್ದ ಶತಮಾನಗಳ ಹಿಂದೆಯೇ ಧ್ವನಿ ಎತ್ತಿ, ಸಾಮಾಜಿಕ ಅಸಮಾನತೆಗಳ ವಿರುದ್ಧ ಕನಕದಾಸರು ಅರಿವು ಮೂಡಿಸಿದ್ದಾರೆ. ಎಲ್ಲಾ ಮಹಾನಾಯಕರನ್ನು ಕೇವಲ ಒಂದೊಂದು ಜಾತಿಗೆ ಸೀಮಿತಗೊಳಿಸದೆ, ಅವರ ಮೌಲ್ಯಗಳನ್ನು ಅರಿತು ಪಾಲನೆ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಅವರು ಕನಕದಾಸರ ಜೀವನ, ಸಾಹಿತ್ಯ ಶ್ರೇಷ್ಠತೆ , ಆದರ್ಶ, ಭಕ್ತಿ ಮಾರ್ಗ ದಲ್ಲಿ ಕಂಡ ಸತ್ಯಗಳು, ಸಾಮಾಜಿಕ ಪರಿವರ್ತನೆಗೆ ಮಾಡಿದ ಪ್ರಯತ್ನಗಳು ಮತ್ತು ಅವರ ಕೊಡುಗೆಗಳ ಬಗ್ಗೆ ವಿವರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿದ್ದೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗೇಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.