ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಆಶ್ವಾಸನೆ ಈಡೇರಿಸಿದ ಕಾಂಗ್ರೆಸ್‌ ಸರ್ಕಾರ: ಸಚಿವ ಕೆ.ಎನ್‌. ರಾಜಣ್ಣ

Published 1 ನವೆಂಬರ್ 2023, 13:35 IST
Last Updated 1 ನವೆಂಬರ್ 2023, 13:35 IST
ಅಕ್ಷರ ಗಾತ್ರ

ಹಾಸನ: ನಮ್ಮ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಆದ್ಯತೆ ನೀಡಿದ್ದು, ಎಲ್ಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಸೇರಿದಂತೆ ಒಟ್ಟು 4,95,018 ಪಡಿತರ ಚೀಟಿದಾರರಿದ್ದು, 5 ಕೆ.ಜಿ. ಹೆಚ್ಚುವರಿ ಅಕ್ಕಿ ಬದಲಿಗೆ ಪ್ರತಿ ಕಾರ್ಡ್‍ದಾರರಿಗೆ ₹ 170 ರಂತೆ ಹಣ ಪಾವತಿ ಮಾಡಲಾಗುತ್ತಿದೆ. ಈ ಸಂಬಂಧ ಜಿಲ್ಲೆಗೆ ಜುಲೈನಿಂದ ಸೆಪ್ಟೆಂಬರ್‌ವರೆಗೆ ₹ 67.42 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 65.82 ಕೋಟಿ ಅರ್ಹ ಫಲಾನುಭವಿಗಳಿಗೆ ಪಾವತಿಸಲಾಗಿದೆ ಎಂದರು.

ಶಕ್ತಿ ಯೋಜನೆ ಯೋಜನೆಯಡಿ ಜಿಲ್ಲೆಯಲ್ಲಿ ಜೂನ್ 11 ರಿಂದ ಅ.25 ರವರೆಗೆ ಜಿಲ್ಲೆಯಲ್ಲಿ 2.67 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದರ ಮೊತ್ತ ₹ 84.77 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಮನೆಯ ಯಜಮಾನಿಗೆ ಮನೆ ನಡೆಸಲು ಅನುಕೂಲವಾಗುವಂತೆ ಪ್ರತಿ ತಿಂಗಳು ₹ 2ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 4,69,652 ಫಲಾನುಭಗಳಿದ್ದಾರೆ. ಜಿಲ್ಲೆಯ 448 ಕೇಂದ್ರಗಳಲ್ಲಿ 4,23,3160 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ ಅಂತ್ಯಕ್ಕೆ 3,60,826 ಫಲಾನುಭವಿಗಳಿಗೆ ತಲಾ ₹ 2ಸಾವಿರದಂತೆ ₹ 72.16 ಕೋಟಿ ಮತ್ತು ಸೆಪ್ಟೆಂಬರ್‌ ಅಂತ್ಯಕ್ಕೆ 3,33,412 ಫಲಾನುಭವಿಗಳಿಗೆ ₹ 66.68 ಕೋಟಿ ಪಾವತಿಸಲಾಗಿದೆ ಎಂದು ತಿಳಿಸಿದರು.

ಗೃಹಜ್ಯೋತಿ ಯೋಜನೆಗೆ ಆಗಸ್ಟ್ 5 ರಂದು ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 5,46,278 ಗೃಹಬಳಕೆದಾರರಿದ್ದು, 4,92,785 ಗ್ರಾಹಕರು ನೋಂದಣಿಯಾಗಿದ್ದಾರೆ. ಈ ಯೋಜನೆಯಡಿ ಸೆಪ್ಟೆಂಬರ್ ಅಂತ್ಯದವರೆಗೆ 3,13,356 ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ 8 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 50,062 ರೈತರಿಗೆ ₹ 34.94 ಕೋಟಿ ಬೆಳೆ ವಿಮೆ ಪರಿಹಾರ ಪಾವತಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 80,534 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಹಿಂಗಾರು ಹಂಗಾಮಿನ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಬಿತ್ತನೆ ಬೀಜಗಳ ಪೂರೈಕೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೇಡಿಕೆಯಂತೆ ರಿಯಾಯಿತಿ ದರದಲ್ಲಿ 1,84,450 ರೈತರಿಗೆ ₹ 1.79 ಕೋಟಿ ಸಹಾಯಧನದಲ್ಲಿ 10,987 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗಿರುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ತೆಂಗಿನ ಬೆಳೆಯಲ್ಲಿ ಹೆಚ್ಚುತ್ತಿರುವ ಬೆಂಕಿ ರೋಗ (ಕಪ್ಪು ತಲೆ ಹುಳ), ರೂಗೋಸ್ ಬಿಳಿ ನೊಣ ಹಾಗೂ ರೈನೋಸರಸ್ ದುಂಬಿಗಳ ಹಾವಳಿಯನ್ನು ನಿಯಂತ್ರಿಸಲು ರೈತರಿಗೆ ತಾಂತ್ರಿಕ ಮಾಹಿತಿಯನ್ನು ನೀಡಲು ವಿಚಾರ ಸಂಕಿರಣ, ತರಬೇತಿ, ಕ್ಷೇತ್ರೋತ್ಸವಗಳನ್ನು ಹಮ್ಮಿಕೊಂಡು, ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣಕ್ಕೆ ಕರಪತ್ರಗಳನ್ನು ನೀಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಇಲಾಖೆಯ ವಿವಿಧ ಯೋಜನೆಗಳಡಿ ತೆಂಗಿನ ರೋಗ ಕೀಟ ನಿಯಂತ್ರಣಕ್ಕಾಗಿ ಅವಶ್ಯವಿರುವ ಸಸ್ಯ ಸಂರಕ್ಷಕಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೆಂಗು ಬೆಳೆಯುವ ಪ್ರಧಾನ ತಾಲ್ಲೂಕುಗಳಲ್ಲಿ ರೈತರಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ಒಟ್ಟು 47,373 ಸಸಿಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರದಲ್ಲಿ ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಮೊದಲ ಹಂತದಲ್ಲಿ ₹ 10 ಕೋಟಿಗಳಿಗೆ ಹಾಗೂ ಎರಡನೇ ಹಂತದಲ್ಲಿ ₹ 20 ಕೋಟಿ ಅನುಮೋದನೆಗೊಂಡಿದ್ದು, ಎರಡು ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಹಾಸನ ನಗರದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ₹ 10 ಕೋಟಿಗಳಿಗೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಯುನೆಸ್ಕೋ ಪಟ್ಟಿಗೆ ಬೇಲೂರು

ಹಳೇಬೀಡು ಕರ್ನಾಟಕ ಶಿಲ್ಪಕಲೆಗಳ ತವರೂರು. ಬೇಲೂರು ಹಳೇಬೀಡು ಶ್ರವಣಬೆಳಗೊಳ ಈ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದರೆ ಹಂಪೆ ಬಾದಾಮಿ ಐಹೊಳೆ ಪಟ್ಟದಕಲ್ಲು ಹೀಗೆ ನೂರಾರು ಸ್ಥಳಗಳು ನಮ್ಮ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಇಂದಿಗೂ ಸಾರುತ್ತಿವೆ ಎಂದು ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಬೇಲೂರು ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳು ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವುದು ಸಂತದ ವಿಷಯ ಎಂದರು. ಹಾಸನ ಜಿಲ್ಲೆಯ ಹೆಮ್ಮೆ ಎಂದರೆ ಹಲ್ಮಿಡಿ ಶಾಸನ. ಕನ್ನಡ ಲಿಪಿಯಲ್ಲಿ ರಚಿಸಲಾದ ಮೊದಲ ಶಾಸನವು ಜಿಲ್ಲೆಯ ಹಲ್ಮಿಡಿ ಎಂಬ ಸ್ಥಳದಲ್ಲಿದೆ. ಶ್ರವಣಬೆಳಗೊಳದಲ್ಲಿ 57.8 ಅಡಿ ಎತ್ತರದ ಏಕಶಿಲಾ ಗೊಮ್ಮಟ ಮೂರ್ತಿ ಹಾಸನದಲ್ಲಿ ನೆಲೆಸಿರುವ ಹಾಸನಾಂಬ ದೇವಿ ದೇಗುಲಗಳು ವಿಶ್ವಪ್ರಸಿದ್ಧಿಯಾಗಿವೆ ಎಂದು ಹೇಳಿದರು.

ಹೇಮಾವತಿ ಜಲಾಶಯವು ಹಾಸನ-ತುಮಕೂರು-ಮಂಡ್ಯ ಜಿಲ್ಲೆಯ ರೈತರಿಗೆ ವರದಾನವಾಗಿದ್ದು ಹೇಮಾವತಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದರು.

ಶಾಸಕ ಸ್ವರೂಪ್‌ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ತಹಶೀಲ್ದಾರ ಶ್ವೇತಾ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ. ಶಿವಣ್ಣ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ, ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದ್ದರು. 

ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಶಾಲಾ ಮಕ್ಕಳು ಮಯೂರ ವರ್ಮ ಪಟ್ಟಾಭಿಷೇಕ ನಾಟಕ ಪ್ರದರ್ಶಿಸಿದರು. 
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಶಾಲಾ ಮಕ್ಕಳು ಮಯೂರ ವರ್ಮ ಪಟ್ಟಾಭಿಷೇಕ ನಾಟಕ ಪ್ರದರ್ಶಿಸಿದರು. 
ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. 
ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. 
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ  ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಗೌರವ ವಂದನೆ ಸ್ವೀಕರಿಸಿದರು.
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ  ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಗೌರವ ವಂದನೆ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT