ಕೊಳವೆ ಬಾವಿ ಕೊರೆಯಲು ಅನುಮತಿ ಕಡ್ಡಾಯ

7
ಅಂತರ್ಜಲ ಸಮಿತಿ ಸಭೆಯಲ್ಲಿ ಡಿ.ಸಿ ರೋಹಿಣಿ ಸೂಚನೆ

ಕೊಳವೆ ಬಾವಿ ಕೊರೆಯಲು ಅನುಮತಿ ಕಡ್ಡಾಯ

Published:
Updated:
Deccan Herald

ಹಾಸನ: ಅಂತರ್ಜಲ ಪ್ರಮಾಣ ಕುಸಿತಗೊಂಡಿರುವ ಅರಸೀಕೆರೆಯಲ್ಲಿ ಯಾವುದೇ ಉದ್ದೇಶಕ್ಕಾಗಿ ಬಾವಿ, ಕೊಳವೆ ಬಾವಿ ಕೊರೆದು ಅಂತರ್ಜಲವನ್ನು ತೆಗೆಯಲು ಮತ್ತು ಬಳಸಲು ನಿಯೋಜಿತ ಸಮಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಂತರ್ಜಲ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂತರ್ಜಲ ಅಭಿವೃದ್ಧಿ, ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ 43 ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳನ್ನು ಅಧಿಸೂಚಿಸಿದ್ದು, ಅದರಲ್ಲಿ ಜಿಲ್ಲೆಯ ಅರಸೀಕೆರೆ ತಾಲ್ಲೂಕು ಅತಿ ಬಳಕೆ ಪ್ರದೇಶವಾಗಿದೆ.
ಈ ತಾಲ್ಲೂಕಿನಲ್ಲಿ ಸಾರ್ವಜನಿಕ ಕುಡಿಯುವ ನೀರು ಕೊಳವೆ ಬಾವಿಗಳಿರುವ 500 ಮೀಟರ್ ವ್ಯಾಪ್ತಿಯಲ್ಲಿ ಹೊಸದಾಗಿ ಕೊರೆಸಲು ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸದೆ ಕೊಳವೆ ಬಾವಿ ಕೊರೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬಿದ್ದು ಸಾವಿಗೀಡಾಗುವ ಅವಘಡ ತಪ್ಪಿಸಲು ಕೋರ್ಟ್‌ ಆದೇಶ ಪಾಲನೆ ಮಾಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಕೊಳವೆ ಬಾವಿ ವಿಫಲವಾದಲ್ಲಿ ಮಣ್ಣು, ಕಲ್ಲಿನಿಂದ ಸಂಪೂರ್ಣವಾಗಿ ಮುಚ್ಚಿ ಮುಳ್ಳಿನ ಗಿಡ ನೆಟ್ಟು ಸುರಕ್ಷಿತವಾಗಿಡುವಂತೆ ರಿಗ್ ಯಂತ್ರಗಳ ಮಾಲೀಕರು ಜವಾಬ್ದಾರಿ ವಹಿಸಬೇಕು. ವಿಫಲವಾದ ಕೊಳವೆ ಬಾವಿ ಮುಚ್ಚಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಗಾ ವಹಿಸುವಂತೆ ಸೂಚಿಸಿದರು.

ಸಫಲ, ವಿಫಲ ಕೊಳವೆ ಬಾವಿಗಳ ಬಗ್ಗೆ ಪರಿಶೀಲನೆ ನಡೆಸಿ ನಿಗದಿತ ನಮೂನೆಯಲ್ಲಿ ನೋಂದಾಯಿಸಬೇಕು. ಪ್ರತಿ ತಿಂಗಳ ಮೊದಲ ತಾರೀಖು ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು. ತಾಲ್ಲೂಕಿನ ಕ್ರೂಢೀಕೃತ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಕಳುಹಿಸಬೇಕು. ಅದೇ ರೀತಿ ನಗರ ಸ್ಥಳೀಯ ಪ್ರಾಧಿಕಾರಗಳು ತಿಂಗಳ ಮಾಹಿತಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸಲ್ಲಿಸಬೇಕು. ಮೂರು ತಿಂಗಳಿಗೊಮ್ಮೆ ಕ್ರೂಢೀಕರಿಸಿ ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕರಿಗೆ ಕಳುಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ಆರ್.ರಮೇಶ್, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಡಿ. ಕುಮಾರ ಸ್ವಾಮಿ, ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜೇಶ್, ಹಿರಿಯ ಭೂವಿಜ್ಞಾನಿ ಸುಧಾ ಹಾಜರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !