ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಂದ ಹೈಡೋಸ್‌ ಇಂಜೆಕ್ಷನ್‌: ಕೋಮಾ ಸ್ಥಿತಿಗೆ ತಲುಪಿದ ಮಹಿಳೆಯರು

ಸಂಬಂಧಿಕರ ಆರೋಪ
Last Updated 19 ಡಿಸೆಂಬರ್ 2018, 14:25 IST
ಅಕ್ಷರ ಗಾತ್ರ

ಹಾಸನ: ಸಂತಾನಶಕ್ತಿಹರಣ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಹಿಳೆಯರಿಗೆ, ವೈದ್ಯರು ಆಪರೇಷನ್ ಮುಗಿಸಿ ಇಂಜೆಕ್ಷನ್ ನೀಡಿದ ಕೆಲವೇ ಹೊತ್ತಿನಲ್ಲಿ ಅಸ್ವಸ್ಥಗೊಂಡಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕೇನಹಳ್ಳಿಯ ಕೀರ್ತಿ ಹಾಗೂ ಮಂಡ್ಯ ಜಿಲ್ಲೆ ಕಿಕ್ಕೇರಿಯ ಮಹದೇವಮ್ಮ ಅವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

ಈ ನಡುವೆ ಮಹಿಳೆಯರು ಕೋಮಾ ಸ್ಥಿತಿ ತಲುಪಲು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಹಿಳೆಯರ ಸಂಬಂಧಿಕರು ದಿಢೀರ್ ಪ್ರತಿಭಟನೆ ನಡೆಸಿದರು.

ಡಿ.18 ರಂದು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದರು. ಆಪರೇಷನ್ ಮುಗಿದ ನಂತರ ಇಂಜೆಕ್ಷನ್ ನೀಡುತ್ತಿದ್ದಂತೆಯೇ ಇಬ್ಬರೂ ಅಸ್ವಸ್ಥಗೊಂಡರು.

ಮಹಿಳೆಯರ ಸಂಬಂಧಿಕರು ವೈದ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು.

‘ಮಹಿಳೆಯರು ಏಕಾಏಕಿ ಕೋಮಾ ಸ್ಥಿತಿಗೆ ತಲುಪಲು ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೈಡೋಸ್ ಇಂಜೆಕ್ಷನ್ ನೀಡಿದ್ದರಿಂದಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೀರ್ತಿ ಸಂಬಂಧಿ ಕಿರಣ್‌ ಆಗ್ರಹಿಸಿದರು.

‘ಶಸ್ತ್ರಚಿಕಿತ್ಸೆಗೂ ಮುನ್ನ ಹಾಗೂ ನಂತರ ಮಹಿಳೆಯರು ಚೆನ್ನಾಗಿದ್ದರು. ಇಂಜೆಕ್ಷನ್ ನೀಡಿದ ಕೂಡಲೇ ಪರಿಸ್ಥಿತಿಯೇ ಬದಲಾಯಿತು. ಇದಕ್ಕೆ ಅನೇಕ ವೈದ್ಯರು ಪರೀಕ್ಷೆ ಮಾಡಿದ್ದು ಕಾರಣ. ಸ್ಪಷ್ಟ ಉತ್ತರ ನೀಡದ ವೈದ್ಯರು, 48 ಗಂಟೆವರೆಗೆ ಏನೂ ಆಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿ ಜವಾಬ್ದಾರಿಯಿಂದ ಜಾರಿಕೊಳ್ಳಲು ನೋಡುತ್ತಿದ್ದಾರೆ’ ಎಂದು ಕಿರಣ್‌ ಆರೋಪಿಸಿದರು.

‘ಈ ಪ್ರಕರಣದಲ್ಲಿ ವೈದ್ಯರ ಕಡೆಯಿಂದ ಯಾವುದೇ ರೀತಿಯ ತಪ್ಪಾಗಿಲ್ಲ. ನುರಿತ ವೈದ್ಯರೇ ಆಪರೇಷನ್ ಮಾಡಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಈ ರೀತಿ ಆಗುವುದು ಸಹಜ. ಮಹಿಳೆಯರ ಆರೋಗ್ಯ ಸ್ಥಿತಿ ಚೆನ್ನಾಗಿಯೇ ಇದೆ. ಕೆಲವೇ ಗಂಟೆಗಳಲ್ಲಿ ಗುಣಮುಖರಾಗಲಿದ್ದಾರೆ’ ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT