ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಪ್ರವೇಶಕ್ಕೆ ಹೆಚ್ಚಿದ ಬೇಡಿಕೆ

Published 30 ಮೇ 2023, 20:30 IST
Last Updated 30 ಮೇ 2023, 20:30 IST
ಅಕ್ಷರ ಗಾತ್ರ

ಎಂ. ಪಿ. ಹರೀಶ್

ಆಲೂರು: ಸರ್ಕಾರದ ವತಿಯಿಂದ ನಡೆಯುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆ ಜನಮನ್ನಣೆ ಗಳಿಸಿದ್ದು, ಇಂತಹ ಶಾಲೆಗಳನ್ನು ಕನಿಷ್ಠ ಹೋಬಳಿಗೊಂದು ತೆರೆಯಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿದರೆ ಅದೆಷ್ಟೊ ಬಡ ಕುಟುಂಬಗಳು ಶೈಕ್ಷಣಿಕವಾಗಿ ಮುನ್ನಡೆಯಲು ಅವಕಾಶವಾಗುತ್ತದೆ ಎಂದು ಜನರು ಮನವಿ ಮಾಡುತ್ತಿದ್ದಾರೆ.

2008-09 ರಲ್ಲಿ ತಾಲ್ಲೂಕಿಗೆ ಸೀಮಿತವಾಗಿ ಕೆ. ಹೊಸಕೋಟೆ ಹೋಬಳಿ ರಾಯರಕೊಪ್ಪಲು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ತೆರೆಯಲಾಯಿತು. ಈ ಶಾಲೆಯಲ್ಲಿ ಎಲ್.ಕೆ.ಜಿ. ಯಿಂದ ಹತ್ತನೆ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ಒಟ್ಟು 547 ವಿದ್ಯಾರ್ಥಿಗಳು ಎಲ್.ಕೆ.ಜಿ. ಯಿಂದ 10 ನೆ ತರಗತಿವರೆಗೆ ತಮಗಿಷ್ಟವಾದ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 8, 9 ಮತ್ತು 10 ನೇ ತರಗತಿಯಲ್ಲಿ 160 ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ. ಪ್ರತಿ ವರ್ಷ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ 100 ರಷ್ಟು ಫಲಿತಾಂಶ ಬರುತ್ತಿದೆ.

ರಾಯರಕೊಪ್ಪಲು ಕೆ.ಪಿ.ಎಸ್. ಶಾಲೆಯಲ್ಲಿ ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣ ದೊರಕುತ್ತಿದೆ. ಮಕ್ಕಳ ದಾಖಲಾತಿ ಇಮ್ಮಡಿಯಾಗುತ್ತಿದೆ. ದಾಖಲಾತಿ ಮಾಡಿಕೊಳ್ಳಲು ಹರಸಾಹಸ ಪಡಬೇಕಾಗಿದೆ.
ಗುರುದೇವ್ ಮಲ್ಲಾಪುರ, ಗ್ರಾ.ಪಂ. ಸದಸ್ಯ

ವರ್ಷದಿಂದ ವರ್ಷಕ್ಕೆ ಮಕ್ಕಳು ಶಾಲೆಗೆ ಸೇರುವ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ, ಮೂರು ತಿಂಗಳು ಹಿಂದೆ ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿರವರ ಪ್ರಯತ್ನದಿಂದ ₹ 2 ಕೋಟಿ ವೆಚ್ಚದಲ್ಲಿ 11 ಕೊಠಡಿಗಳನ್ನು ನಿರ್ಮಾಣ ಮಾಡಲಾಯಿತು.

ಈ ಶಾಲೆಯಲ್ಲಿರುವ ವಿಶೇಷತೆಯೆಂದರೆ ಸ್ಮಾರ್ಟ್‍ಕ್ಲಾಸ್, ಹೈಟೆಕ್ ವಿಜ್ಞಾನ ಪ್ರಯೋಗಾಲಯ, ಪೀಠೋಪಕರಣಗಳು, ಆಟೋಟ ಉಪಕರಣಗಳು, ಎಲ್.ಕೆ.ಜಿ., ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಬೇಕಾದ ಉಪಕರಣಗಳು, ಹೈಟೆಕ್ ಶೌಚಾಲಯ, ಪ್ರತಿ ವಿಷಯಕ್ಕೆ ಪ್ರತ್ಯೇಕ ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರೂ ಪದವೀಧರ ಶಿಕ್ಷಕರಿದ್ದಾರೆ. 6 ರಿಂದ 8 ತರಗತಿವರೆಗೆ ಸಮಾಜ, ಗಣಿತ ಮತ್ತು ಇಂಗ್ಲಿಷ್‌ ಶಿಕ್ಷಣಕ್ಕೆ ಪ್ರತ್ಯೇಕ ಪದವೀಧರ ಶಿಕ್ಷಕರಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ಕೆ.ಪಿ.ಎಸ್. ಶಾಲೆ ತೆರೆಯಲು ಷೇತ್ರ ಶಿಕ್ಷಣಾಧಿಕಾರಿಗಳೊಡನೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇನೆ.
ಸಿಮೆಂಟ್ ಮಂಜು, ಶಾಸಕ

ಶಾಲೆ ಪ್ರಗತಿಗೆ ಅನುಗುಣವಾಗಿ ಶಾಲಾ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು, ಸದಸ್ಯರು ಒಗ್ಗೂಡಿ ಹಣ ಕ್ರೋಡೀಕರಿಸಿಕೊಂಡು ಒಂದು ಶಾಲಾ ಬಸ್‌ ಖರೀದಿಸಿದ್ದು, ವಿದ್ಯಾರ್ಥಿಗಳನ್ನು ಕರೆತಂದು ಕಳುಹಿಸಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆಯಾಗಳ ಸೌಲಭ್ಯವಿದೆ. ಪ್ರತಿ ವರ್ಷ ಶಾಲೆಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ₹ 6 ಲಕ್ಷ ಅನುದಾನ ದೊರಕುತ್ತದೆ. ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಶಿಕ್ಷಣಕ್ಕೆ ವಿಶೇಷವಾಗಿ ಆಂಗ್ಲ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆಟೋಟಗಳಿಗೆ ಪ್ರತ್ಯೇಕ ಅನುದಾನ ಬರುತ್ತದೆ. ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ಸೈಕಲ್, ವಿದ್ಯಾರ್ಥಿ ವೇತನ ಸೇರಿದಂತೆ ಬಹುತೇಕ ಎಲ್ಲ ಸೌಲಭ್ಯಗಳಿವೆ. ಒಂದು ಶಾಲೆಗೆ ಏನು ಸೌಲಭ್ಯಗಳಿರಬೇಕೊ ಎಲ್ಲವೂ ಇದೆ. ಒಟ್ಟು 27 ಪದವೀಧರ ಶಿಕ್ಷಕರಿದ್ದಾರೆ.

ರಾಯರಕೊಪ್ಪಲು ಗ್ರಾಮದಲ್ಲಿರುವ ಕೆ.ಪಿ.ಎಸ್. ಶಾಲೆಗೆ ಮಕ್ಕಳು ದಾಖಲಾಗಲು ತುಂಬಾ ಬೇಡಿಕೆ ಇದೆ. ನಮ್ಮ ಮಕ್ಕಳು ಸೇರಲು ಅವಕಾಶ ಕಲ್ಪಿಸಿಕೊಡಿ ಎಂದು ಅದೆಷ್ಟೊ ಪೋಷಕರು ಒತ್ತಡ ತರುತ್ತಿದ್ದಾರೆ. ತಳಹದಿಯಿಂದ ಕನ್ನಡ-ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರಕುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಪಾಳ್ಯ, ಕಣತೂರು, ಕುಂದೂರು ಮತ್ತು ಕಸಬಾ ಹೋಬಳಿ ಕೇಂದ್ರಗಳಲ್ಲಿ ತಲಾ ಒಂದು ಕೆ.ಪಿ.ಎಸ್. ಶಾಲೆಯನ್ನು ತೆರೆದರೆ ಒಳ್ಳೆಯದು ಎನ್ನುತ್ತಾರೆ ಆಲೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT