ಕುಲದೇವರ ದರ್ಶನ ಪಡೆದ ಗೌಡರ ಕುಟುಂಬ

7
ಸಿ.ಎಂ ಆದ ಬಳಿಕ ತವರು ಜಿಲ್ಲೆಗೆ ಮೊದಲ ಭೇಟಿ, ಬಿ ಫಾರಂಗೂ ಪೂಜೆ

ಕುಲದೇವರ ದರ್ಶನ ಪಡೆದ ಗೌಡರ ಕುಟುಂಬ

Published:
Updated:
Deccan Herald

ಹೊಳೆನರಸೀಪುರ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ ಭೇಟಿ ನೀಡಿ ವಿವಿಧ ದೇವಾಲಯಗಳಲ್ಲಿ ಶ್ರಾವಣ ಸೋಮವಾರದ ಪೂಜೆ ಸಲ್ಲಿಸಿದರು.

ತಂದೆ ಎಚ್.ಡಿ.ದೇವೇಗೌಡ, ತಾಯಿ ಚೆನ್ನಮ್ಮ, ಪತ್ನಿ ಅನಿತಾ ಕುಮಾರಸ್ವಾಮಿ ಹಾಗು ಅಣ್ಣ ಎಚ್.ಡಿ.ರೇವಣ್ಣ ಅವರೊಂದಿಗೆ ಕುಲದೇವರು ಹರದನಹಳ್ಳಿಯ ದೇವೇಶ್ವರ ದೇವಾಲಯ ಸೇರಿದಂತೆ ಒಟ್ಟು ನಾಲ್ಕು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿದರು.

ಬೆಳಿಗ್ಗೆ ಹುಟ್ಟೂರು ಹರದನಹಳ್ಳಿಯಲ್ಲಿರುವ ಕುಲದೇವರು ದೇವೇಶ್ವರ ದೇವಾಲಯಕ್ಕೆ ತಂದೆ-ತಾಯಿ, ಪತ್ನಿ ಹಾಗೂ ಸೋದರನೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ, ಎಲ್ಲಾ ಪರಿವಾರ ದೇವರುಗಳಿಗೆ ಕೈ ಮುಗಿದು ನಾಡು ಸುಭಿಕ್ಷವಾಗಿರಲಿ ಎಂದು ಬೇಡಿಕೊಂಡರು.

ನಂತರ ಹೊಳೆನರಸೀಪುರದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಹಾಗೂ ಎದುರುಮುಖ ಆಂಜನೇಯ, ಮಾವಿನ ಕೆರೆ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಈ ವೇಳೆ ಕೆಲವು ದೇವಾಲಯಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಾಲ್ಕು ದೇವಾಲಯಗಳಿಗೆ ಭೇಟಿ ನೀಡಿದ ಕುಮಾರಸ್ವಾಮಿ, ಸೋದರ ರೇವಣ್ಣ ಅವರ ಮಾರ್ಗದರ್ಶನದಂತೆ ದೇವಾಲಯ ಪ್ರದಕ್ಷಿಣೆ ಮಾಡಿ, ಅಭಿಷೇಕ, ಮಹಾಮಂಗಳಾರತಿ ಮೊದಲಾದ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಕುಮಾರಸ್ವಾಮಿ ಮಾತನಾಡಿ , ‘ನಾಡು ಸುಭಿಕ್ಷವಾಗಿರಲಿ, ನಾಡಿನ ರೈತರಿಗೆ ಒಳ್ಳೆಯದಾಗಲಿ. ಜನ ಪರವಾದ ಕೆಲಸ ಮಾಡಲು ದೇವರ ಆಶೀರ್ವಾದ ಬೇಡಲು ಪೂಜೆ ಸಲ್ಲಿಸಿದ್ದೇವೆ’ ಎಂದರು.

‘ಆನೆ ಕಾರಿಡಾರ್ ನಿರ್ಮಾಣ ಸಂಬಂಧ ಶೀಘ್ರ ಸಭೆ ಕರೆಯಲಾಗುವುದು. ಐಐಟಿಗೆ ಸಮಾನವಾದ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗುವುದು. ಇದರಲ್ಲಿ ರಾಜ್ಯದ ಮಕ್ಕಳೇ ಕಲಿಯಬೇಕು’ ಎಂದರು.

ಅಜೀಮ್ ಫೌಂಡೇಶನ್ ಆಂದ್ರದಲ್ಲಿ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯುವ ಕಾರ್ಯಕ್ರಮ ಮಾಡಿದೆ. ಅದೇ ರೀತಿ ರಾಜ್ಯದಲ್ಲಿಯೂ ಮಾಡಲಾಗುವುದು. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೊಳಿಸಲು ತಿಂಗಳಲ್ಲಿ ಒಂದು ದಿನ ಹೋಬಳಿ ಅಥವಾ ಪಂಚಾಯಿತಿ ಮಟ್ಟದಲ್ಲಿ ರೈತರೊಂದಿಗೆ ಚರ್ಚಿಸಲಾಗುವುದು ಎಂದು ನುಡಿದರು.

ಭೇಟಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !