ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಬ್‌ ಟೆಕ್ನಿಷಿಯನ್ ಕಣ್ಣಿಗೆ ಗಂಭೀರ ಗಾಯ

ದೊಡ್ಡ ಮೇಟಿಕುರ್ಕೆ: ಕೋವಿಡ್‌ ಪರೀಕ್ಷಾ ವರದಿ ತಪ್ಪಾಗಿ ನೀಡಿದ್ದಾಗಿ ಆರೋಪಿಸಿ ಹಲ್ಲೆ
Last Updated 29 ಸೆಪ್ಟೆಂಬರ್ 2020, 21:08 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನ ದೊಡ್ಡ ಮೇಟಿಕುರ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಂತ್ರಜ್ಞ ಧರಣೀಶ್ ಎಂಬುವವರ ಮೇಲೆ ಕೆಲವರು ಸೋಮವಾರ ರಾತ್ರಿ ಹಲ್ಲೆ ಮಾಡಿದ್ದು, ಅವರ ಬಲಗಣ್ಣಿಗೆ ಗಂಭೀರ ಗಾಯವಾಗಿದೆ.

ವ್ಯಕ್ತಿಯೊಬ್ಬರ ಕೋವಿಡ್‌ ಪರೀಕ್ಷಾ ವರದಿಯನ್ನು ತಪ್ಪಾಗಿ ನೀಡಿದ್ದಾಗಿ ಆರೋಪಿಸಿ, ಆ ವ್ಯಕ್ತಿಯ ಸಂಬಂಧಿಕರಾದ ಹಟ್ಟಿ ಗ್ರಾಮದ ಮಂಜುನಾಥ, ಪ್ರದೀಪ ಹಾಗೂ ಶಶಿ ಎಂಬುವವರು ಹಲ್ಲೆ ಮಾಡಿದ್ದಾರೆ.

ಗ್ರಾಮದ ವ್ಯಕ್ತಿಯೊಬ್ಬರು ಸೆ.12ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಸೆ.15ರಂದು ವರದಿ ಪಾಸಿಟಿವ್‌ ಬಂದಿದ್ದರಿಂದ ಕ್ವಾರಂಟೈನ್‌ ಆಗಲು ತಿಳಿಸಲಾಗಿತ್ತು. ಜೊತೆಗೆ ಪ್ರಾಥಮಿಕ ಸಂಪರ್ಕಿತರಿಗೆ, ಪರೀಕ್ಷೆಗೆ ಒಳಪಡುವಂತೆ ತಿಳಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೋಂಕಿತ ವ್ಯಕ್ತಿಯ ಹತ್ತಿರದ ಸಂಬಂಧಿ ಮಂಜುನಾಥ್, ‘ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ ಮಾಡಿಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ, ನಿಮ್ಮ ಆಸ್ಪತ್ರೆಯಲ್ಲಿ ಮಾತ್ರ ಪಾಸಿಟಿವ್‌ ಎಂದು ಸುಳ್ಳು ವರದಿ ನೀಡಿದ್ದೀರಿ. ಯಾರೂ ಆಸ್ಪತ್ರೆಗೆ ಬರುವುದಿಲ್ಲ, ಯಾವ ಸಿಬ್ಬಂದಿಯೂ ಮನೆ ಬಾಗಿಲಿಗೆ ಬರಬಾರದು’ ಎಂದು ಗಲಾಟೆ ಮಾಡಿ, ಇನ್ನಿಬ್ಬರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೀಡಾದ ಧರಣೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಬಲಗಣ್ಣಿನ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಘಟನೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಚರ್ಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಧರಣೀಶ್ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರತಿಭಟನೆ: ಹಲ್ಲೆ ಖಂಡಿಸಿ, ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಾ.ರಮೇಶ್ ಮಾತನಾಡಿ, ‘ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿರುವ ವರದಿ ಕೊಡಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ಎಷ್ಟು ದಿನಗಳ ನಂತರ ಪರೀಕ್ಷೆ ಮಾಡಿಸಿದ್ದೀರಿ ತಿಳಿಸಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಯಾವುದಕ್ಕೂ ಸ್ಪಂದಿಸದೇ ಪ್ರಯೋಗಾಲಯ ತಂತ್ರಜ್ಞ ಧರಣೀಶ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ಸಾರ್ವಜನಿಕರ ಸೇವೆ ಮಾಡುವ ಆಸ್ಪತ್ರೆ ಸಿಬ್ಬಂದಿಯ ಮೇಲೆ ಮುಂದಿನ ದಿನಗಳಲ್ಲಿ ಈ ರೀತಿಯ ಹಲ್ಲೆ ಪ್ರಕರಣಗಳು ನಡೆಯದಂತೆ ಸರ್ಕಾರ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT