ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಕೃಷಿ ಪದ್ಧತಿ ಜಾರಿ: ಕುಮಾರಸ್ವಾಮಿ ಭರವಸೆ

‘ಎರಡು ದಿನದಲ್ಲಿ ಸಾಲಮನ್ನಾ ತೀರುವಳಿ ಪತ್ರ’
Last Updated 15 ಫೆಬ್ರುವರಿ 2019, 16:04 IST
ಅಕ್ಷರ ಗಾತ್ರ

ಹಾಸನ: ರೈತರು ಕೃಷಿಯ ಬಗ್ಗೆ ನಿರಾಸಕ್ತಿ ಹೊಂದುತ್ತಿದ್ದು, ಯುವಕರು ಕೃಷಿಯತ್ತ ಗಮನ ಹರಿಸುವಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ದುದ್ದ, ಶಾಂತಿಗ್ರಾಮ ಹೋಬಳಿಯ 196 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಕೃಷಿ, ಪಶು ಸಂಗೋಪನೆ, ನೀರಾವರಿಗೆ ಆದ್ಯತೆ ನೀಡಿ ₹ 46000 ಕೋಟಿಗೂ ಅಧಿಕ ಅನುದಾನ ಕಾಯ್ದಿರಿಸಲಾಗಿದೆ. ಫೆ.18 ರಂದು ಹಾಸನದಲ್ಲಿ ಕಾರ್ಯಕ್ರಮ ಏರ್ಪಡಿಸಿ, ರೈತ ಕುಟುಂಬಗಳಿಗೆ ಸಾಲ ಮನ್ನಾ ತೀರುವಳಿ ಪತ್ರ ನೀಡಲಾಗುವುದು ಎಂದರು.

‘ಮೋದಿ ಸರ್ಕಾರ ರೈತರಿಗೆ ವರ್ಷಕ್ಕೆ ₹ 6000 ನೀಡುವುದಾಗಿ ಹೇಳಿದೆ. ಅಧಿಕಾರದ ಕೊನೆ ಹಂತದಲ್ಲಿ ಘೋಷಣೆ ಜಾರಿಗೆ ಬರುತ್ತದೆಯೇ ಎಂಬುದು ಅನುಮಾನ’ ಎಂದು ವ್ಯಂಗ್ಯವಾಡಿದ ಸಿ.ಎಂ, ‘ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಲಿನ ಪ್ರೋತ್ಸಾಹಧನವನ್ನು ₹ 6 ಹೆಚ್ಚಿಸಿದ್ದು ಏ.1 ರಿಂದ ಜಾರಿಗೆ ಬರಲಿದೆ. ರಾಜ್ಯದಲ್ಲಿ ₹ 2400 ಕೋಟಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

ಅಲ್ಲದೇ ಪಂಪ್‌ಸೆಟ್‌ ಉಚಿತ ವಿದ್ಯುತ್ ಪೂರೈಕೆಗೆ ₹ 11000 ಕೋಟಿ ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ. ರೈತ ಎಂದೂ ಸಾಲಗಾರನಾಗಬಾರದು ಎಂಬ ಕಾರಣಕ್ಕೆ ಲಾಭದಾಯಕ ಕೃಷಿ ಪದ್ಧತಿ ಜಾರಿಗೆ ಪ್ರಯತ್ನಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಕೃಷಿ ಲಾಭದಾಯಕವಾಗುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ದುದ್ದ, ಶಾಂತಿಗ್ರಾಮ ಹೋಬಳಿ ಜನರ ಬಹುದಿನಗಳ ಕನಸು ಈಡೇರುವ ಕಾಲ ಬಂದಿದೆ. ₹ 192.64 ಕೋಟಿ ವೆಚ್ಚದಲ್ಲಿ ಹೇಮಾವತಿ ಜಲಾಶಯದಿಂದ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಗಳ 196 ಕೆರೆಗಳಿಗೆ ನೀರು ತುಂಬಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

ದುದ್ದ ಗ್ರಾಮದಲ್ಲಿ 220/110/66 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು ಸೋಮನಹಳ್ಳಿ ಗ್ರಾಮದಲ್ಲಿ 66/11 ಕೆ.ವಿ. ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಸಿ.ಎನ್ ಬಾಲಕೃಷ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತಿಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT