ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಕೊರತೆ: ಕಾಲೇಜು ಸ್ಥಳಾಂತರ?

ಹೆತ್ತೂರು: ಪೂರ್ಣಗೊಂಡ ಹೊಸ ಕಟ್ಟಡ; ಉದ್ಘಾಟನೆಗೂ ಮುನ್ನವೇ ಮುಚ್ಚುವ ಭೀತಿ
Last Updated 7 ಜೂನ್ 2020, 16:54 IST
ಅಕ್ಷರ ಗಾತ್ರ

ಹೆತ್ತೂರು: ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ, ಹೆತ್ತೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಂಗಳೂರಿಗೆ ಸ್ಥಳಾಂತರಕ್ಕೆ ಕಾಲೇಜು ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆ ಮಲೆನಾಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಹೆತ್ತೂರು ಗ್ರಾಮದ ಸುತ್ಲೂ, ನೂರಾರು ಗ್ರಾಮಗಳಿದ್ದು ಬಹುತೇಕ ಗ್ರಾಮಗಳಲ್ಲಿ ರೈತ ಕುಟುಂಬಗಳಿಗೆ ಸೇರಿರುವ ಜನರೇ ಹೆಚ್ಚಿದ್ದಾರೆ. ಈ ಭಾದಲ್ಲಿ ಕಾಡು ಪ್ರಾಣಿಗಳ ಸಮಸ್ಯೆ ಹೆಚ್ಚಾಗಿದ್ದು, ಜೊತೆಗೆ ಕಾಡಾನೆಗಳ ಕಾಟ ವಿಪರೀತವಾಗಿದೆ. ಇದನ್ನು ಮನಗಂಡ ಸರ್ಕಾರ ಸುಮಾರು 12 ವರ್ಷಗಳ ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಹೆತ್ತೂರಿನಲ್ಲಿ ಆರಂಭಿಸಿತ್ತು. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಿತ್ಯವೂ ತಾಲ್ಲೂಕು ಕೇಂದ್ರ ಸಕಲೇಶಪುರ ಹಾಗೂ ಜಿಲ್ಲಾ ಕೇಂದ್ರ ಹಾಸನಕ್ಕೆ ಹೋಗಿ ಬರುವುದು ನಿಂತಿತ್ತು. ಕಾಲೇಜು ಆರಂಭಗೊಂಡ ದಶಕದ ನಂತರ ಸ್ಥಳಾಂತರ ಆದೇಶ ಸ್ಥಳೀಯರ ಆಕ್ರೋಶ ಹೆಚ್ಚಿಸಿದೆ.

ಹೊಸಕಟ್ಟಡ: ಕಾಲೇಜಿನ ಹಳೇ ಕಟ್ಟಡದಲ್ಲಿ ಸರಿಯಾದ ಸೌಲಭ್ಯ ಇರಲಿಲ್ಲ. ಈ ಕಾರಣದಿಂದ ₹4.60 ಕೋಟಿ ವೆಚ್ಚದಲ್ಲಿ ಕಳೆದ ವರ್ಷ ಗ್ರಾಮದಲ್ಲಿ ಕಾಲೇಜು ಕಟ್ಟಡದ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಕಟ್ಟಡದ ಕಾಮಗಾರಿ ಮುಕ್ತಾಯಗೊಂಡಿದ್ದು, ಇನ್ನೇನು ಕೆಲವು ದಿನಗಳಲ್ಲಿ ಉದ್ಘಾಟನೆ
ಗೊಳ್ಳಲಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಲವು ನೆಪ ಹೇಳಿ ಕಾಲೇಜನ್ನು ಬೆಂಗಳೂರಿನ ಹೆಬ್ಬಾಳಕ್ಕೆ ಸ್ಥಳಾಂತರಿಸಲು ಯೋಜಿಸಿದೆ. ಇದರಿಂದ ಕೋಟ್ಯಂತರ ಮೌಲ್ಯದ ಕಟ್ಟಡ ನೂತನ ಕಟ್ಟಡ ಪಾಳು ಬೀಳುವ ಸಾಧ್ಯತೆ ಇದೆ.

ಪ್ರಸ್ತುತ ಈ ಕಾಲೇಜಿನಲ್ಲಿ ಬಿ.ಎ, ಬಿ.ಬಿ.ಎಂ ಹಾಗೂ ಬಿಕಾಂ ತರಗತಿಗಳಿದ್ದು ಸುಮಾರು 40 ಜನ ವಿದ್ಯಾರ್ಥಿಗಳು ವಿದ್ಯಭ್ಯಾಸ ಮಾಡುತ್ತಿದ್ದು, ಒಬ್ಬ ಡಿ ಗ್ರೂಪ್ ನೌಕರ ಸೇರಿದಂತೆ 5 ಜನ ಶಾಶ್ವತ ಉಪನ್ಯಾಸಕರಿದ್ದಾರೆ. ಜೊತೆಗೆ 5 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳಾಂತರಗೊಂಡರೆ, ವಿದ್ಯಾರ್ಥಿಗಳು, ‌ನೌಕರರು ಸಹ ದೂರದ ಊರುಗಳಿಗೆ ಸ್ಥಳಾಂತರಗೊಳ್ಳಬೇಕಾಗಿದೆ.

ಪ್ರಸ್ತುತ ಹೆತ್ತೂರಿನಲ್ಲಿರುವ ದ್ವೀತೀಯ ಪಿಯು ಕಾಲೇಜಿನಲ್ಲಿ 44 ಜನ ವಿದ್ಯಾರ್ಥಿಗಳು ಓದುತ್ತಿದ್ದು, ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಈ ಕಾಲೇಜಿಗೆ ಸೇರಿದರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೊರತೆ ಇರುವುದಿಲ್ಲ.
ಈ ಹಿನ್ನಲೆಯಲ್ಲಿ ಸರ್ಕಾರ ಈ ಕಾಲೇಜನ್ನು ಸ್ಥಳಾಂತರ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT