ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಬಾಳೆಗದ್ದೆ ಕೆರೆ ಈಗ ಕಸದ ತೊಟ್ಟಿ

ಅಳಿವಿನ ಅಂಚಿಗೆ ಸರಿಯುತ್ತಿದೆ ಹೊಯ್ಸಳ ಕಾಲದ ಐತಿಹಾಸಿಕ ಕೆರೆ
Last Updated 6 ಸೆಪ್ಟೆಂಬರ್ 2021, 8:24 IST
ಅಕ್ಷರ ಗಾತ್ರ

ಸಕಲೇಶಪುರ: ಪಟ್ಟಣದ ಹೃದಯಭಾಗದ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 352ರ ರಾಘವೇಂದ್ರ ನಗರ ಬಡಾವಣೆಯಲ್ಲಿ ಬಿ.ಎಂ ರಸ್ತೆ ಪಕ್ಕದ ಬಾಳೆಗದ್ದೆ ಕೆರೆ ಬಹುತೇಕಒತ್ತುವರಿ ಆಗಿದೆ.

ದಾಖಲೆಯಲ್ಲಿ 1.35 ಎಕರೆ ವಿಸ್ತೀರ್ಣ ಹೊಂದಿದ್ದು, ಗ್ರಾಮ ಪಂಚಾಯಿತಿ ನಡೆಸಿದ ಸರ್ವೇಯಲ್ಲಿ ಕೆರೆ ಭೂಮಿ ಬಹುತೇಕ ಒತ್ತುವರಿ ಆಗಿರುವುದು ಪತ್ತೆಯಾಗಿದೆ. ಆದರೆ, ಒತ್ತುವರಿ ತೆರವು ಕಾರ್ಯ ಮಾತ್ರ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಹಾಲೇಬೇಲೂರಿನ ಚನ್ನಕೇಶವ ದೇವಸ್ಥಾನ ನಿರ್ಮಾಣ ಸಂದರ್ಭ ದಲ್ಲಿಯೇ, ಹೊಯ್ಸಳರ ಕಾಲದಲ್ಲಿ ಈ ಕೆರೆ
ನಿರ್ಮಾಣ ಮಾಡಲಾಗಿತ್ತು ಎಂಬ ಪ್ರತೀತಿ ಇದೆ.

ಕೆರೆಯ ಕೆಳಭಾಗ ಸುಮಾರು 150 ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶವಿದೆ. 90ರ ದಶಕದ ವರೆಗೂ
ಮಳಲಿ ಗದ್ದೆ ಬಯಲಿನ ರೈತರ ಭತ್ತದ ಬೆಳೆಗೆ ಈ ಕೆರೆ ನೀರು ಬಳಕೆಯಾಗುತ್ತಿತ್ತು. ಈ ಗದ್ದೆ ಬಯಲುಗಳು ಪಟ್ಟಣಕ್ಕೆ ಹೊಂದಿ ಕೊಂಡಿರುವುದರಿಂದ ಶೇ 40ಕ್ಕಿಂತ ಹೆಚ್ಚು ಪ್ರದೇಶ ನಿವೇಶನಗಳಾಗಿ ಭೂ
ಪರಿವರ್ತನೆ ಗೊಂಡಿವೆ. ಶೇ 20ರಷ್ಟು ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಗೆ
ಸ್ವಾಧೀನ ಗೊಂಡಿದೆ. ಇನ್ನೂ ಶೇ 40 ಭಾಗದಲ್ಲಿ ರೈತರು ಭತ್ತದ ಬೆಳೆ ಬೆಳೆಯುತ್ತಿದ್ದಾರೆ.

ನವೆಂಬರ್‌ ನಿಂದ ಫೆಬ್ರವರಿ ವರೆಗೂ ಬೆಳೆಗೆ ನೀರಿನ ಅಭಾವ ಉಂಟಾಗುತ್ತಿದ್ದು, ಹೇಮಾವತಿ ಹೊಳೆ ಅಥವಾ ಕೊಳವೆ ಬಾವಿಗಳಿಂದ ನೀರು ಬೆಳೆಗೆ ಹಾಯಿಸಬೇಕಾಗಿದೆ. ಈ ಕೆರೆಯ ಹೂಳು ತೆಗೆದು, ಅಭಿವೃದ್ಧಿಪಡಿಸಿದರೆ ಕನಿಷ್ಠ 40 ಎಕರೆ ಭತ್ತ ಬೆಳೆಯುವ ಪ್ರದೇಶಕ್ಕೆ ನೀರು ಹಾಯಿಸಬಹುದಾಗಿದೆ.

ಅಭಿವೃದ್ಧಿ ಕಾಣದೆ ಕೆರೆ ಪಾಳು ಬಿದ್ದಿದೆ. ಸುಮಾರು 30 ವರ್ಷಗಳಿಂದ ಕೆರೆಯ ಹೂಳು ತೆಗೆಯದೆ ಸಂಪೂರ್ಣ ವಾಗಿ ನಿರ್ಲಕ್ಷಿಸಲಾ ಗಿದೆ. ಗಿಡಗಂಟಿ, ಸುತ್ತಲೂ ಕಾಡು ಬೆಳೆದಿದೆ. ತ್ಯಾಜ್ಯ ತಂದು ಕೆರೆಗೆಸುರಿಯುತ್ತಿರುವುದರಿಂದ ಕಸದ ತೊಟ್ಟಿಯಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 612 ಕೆರೆಗಳಿದ್ದು, 168 ಕೆರೆಗಳು ಮಾತ್ರ ಸರ್ವೇ ಕಾರ್ಯ ಮುಗಿದಿದೆ. ಈ ಪೈಕಿ 83ಕೆರೆಗಳು ಒತ್ತುವರಿಯಾಗಿವೆ ಎಂದು ಗುರುತಿಸಲಾಗಿದೆ. ಆದರೂ ಇದುವರೆಗೂ ಒಂದೇ ಒಂದು ಕೆರೆಯಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿಲ್ಲ.

‘ಕೆರೆ ಒತ್ತುವರಿ ಬಗ್ಗೆ2015 ರಿಂದಲೂ ಜಿಲ್ಲಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಳಲಿ ಗ್ರಾಮ ಪಂಚಾಯಿತಿಗೆ ಲಿಖಿತ ದೂರು ನೀಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ 2016ರ ಜ. 1ರಲ್ಲಿಯೇ ಸೂಚನೆ ನೀಡಿದ್ದರೂ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿ ತೆರವುಗೊಳಿಸುವ ವರೆಗೂ ಹೋರಾಟ ನಿಲ್ಲದು’ ಎಂದು ಪುರಸಭೆ ಮಾಜಿ ಸದಸ್ಯ ಎಸ್‌.ಎ. ಮೋಹನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT