ಹಳೇಬೀಡು: ತಟ್ಟೆಹಳ್ಳಿ ಗ್ರಾಮದ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮಧ್ಯೆ ಉದ್ಭವಿಸಿದ್ದ ವಿವಾದಕ್ಕೆ ಬುಧವಾರ ತೆರೆ ಬಿದ್ದಿದೆ.
ಸಕಲೇಶಪುರ ಉಪ ವಿಭಾಗಾಧಿಕಾರಿ ಎಂ.ಕೆ. ಶ್ರುತಿ, ತಹಶೀಲ್ದಾರ್ ಮಮತಾ ಅವರು ಸ್ಥಳಕ್ಕೆ ಭೇಟಿ ನೀಡಿ, ಜಮೀನು ಹಂಚಿಕೊಂಡಿದ್ದ ಗ್ರಾಮದ ವಿವಿಧ ಸಮುದಾಯದವರೊಂದಿಗೆ ಮಾತುಕತೆ ನಡೆಸಿದರು.
‘ಸರ್ಕಾರಿ ಜಮೀನನ್ನು ಯಾರು ಬಳಕೆ ಮಾಡುವಂತಿಲ್ಲ. ಹೊಡೆದಾಡಿಕೊಂಡು ಗ್ರಾಮದ ಶಾಂತಿಗೆ ಧಕ್ಕೆ ತರಬಾರದು’ ಎಂದು ಎಚ್ಚರಿಕೆ ನೀಡಿದರು.
10 ದಿನದ ಹಿಂದೆ ಸರ್ಕಾರಿ ಜಮೀನಿನಲ್ಲಿ ಘರ್ಷಣೆ ನಡೆದಿದ್ದರಿಂದ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸೋಮವಾರ ಮತ್ತೆ ಗ್ರಾಮದಲ್ಲಿ ಎರಡೂ ಗುಂಪಿನ ಮಧ್ಯೆ ಹೊಡೆದಾಟ ನಡೆದಿದ್ದರಿಂದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದರು.
ಅಧಿಕಾರಿಗಳು ಹಾಗೂ ಗ್ರಾಮಸ್ಥರ ಎರಡು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಯಿತು. ಅಧಿಕಾರಿಗಳು ಕಾನೂನು ನಿಯಮ ಹೇಳಿದರೆ, ಗ್ರಾಮಸ್ಥರು ಜಮೀನು ಹಂಚಿಕೆಯ ವಿಚಾರ ಪ್ರಸ್ತಾಪಿಕೊಂಡು ಗಂಟೆಗಟ್ಟಲೆ ಚರ್ಚೆ ಮಾಡಿದರು. ಸರ್ಕಾರಿ ಜಮೀನನ್ನು ಯಾರೂ ಬಳಕೆ ಮಾಡುವಂತಿಲ್ಲ ಎಂದು ಅಧಿಕಾರಿಗಳು ತಿಳಿವಳಿಕೆ ನೀಡಿದರು. ಆದರೆ ಗ್ರಾಮಸ್ಥರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.
‘ಹಿರಿಯರ ಸಮ್ಮುಖದಲ್ಲಿ ಗ್ರಾಮದಲ್ಲಿ ನೆಲೆಸಿರುವ ಎಲ್ಲ ಸಮುದಾಯದವರು ಜಮೀನು ಹಂಚಿಕೆ ಮಾಡಿಕೊಂಡಿದ್ದೇವೆ. ಎಲ್ಲರಿಗೂ ಜಮೀನು ಅಗತ್ಯವಿದೆ. ಹಂಚಿಕೆ ಮಾಡಿಕೊಂಡಿರುವಂತೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ’ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮದ ಮುಖಂಡರು ಜಮೀನು ಹಂಚಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಸುತ್ತೋಲೆ ಇದ್ದರೆ ತಂದುಕೊಡಿ, ಜಮೀನು ಹಂಚಿಕೊಡುತ್ತವೆ ಎಂದು ಅಧಿಕಾರಿಗಳು ಹೇಳಿದರು.
ಸರ್ಕಾರಿ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡುವಂತಿಲ್ಲ. ಜಾನುವಾರುಗಳನ್ನು ಬಿಡಬಾರದು. ಗಿಡ ನೆಡುವಂತಿಲ್ಲ. ನೆಟ್ಟಿರುವ ಇಲ್ಲವೇ ಪ್ರಕೃತಿದತ್ತವಾಗಿ ಬೆಳೆದಿರುವ ಗಿಡಗಳನ್ನು ತೆರವು ಮಾಡುವುದಕ್ಕೂ ಅವಕಾಶ ಇಲ್ಲ ಎಂದು ಹೇಳಿದ ಅಧಿಕಾರಿಗಳು, ಪ್ರತಿಭಟನೆಗೆ ಇಡಲಾಗಿದ್ದ ಗಣ್ಯ ವ್ಯಕ್ತಿಗಳ ಪೋಟೊಗಳು, ಶಾಮಿಯಾನ, ಹಾಸಿಗೆ ಸೇರಿದಂತೆ ಎಲ್ಲ ವಸ್ತುಗಳನ್ನು ತೆರವು ಮಾಡಿಸಿದರು.
ಸಬ್ ಇನ್‌ಸ್ಪೆಕ್ಟರ್ ಶಿವನಗೌಡ ಪಾಟೀಲ್ ಬಂದೋಬಸ್ತ್ ಕೈಗೊಂಡಿದ್ದರು. ಉಪ ತಹಶೀಲ್ದಾರ್ ಭೋಜೆಂದ್ರಪ್ಪ, ಕಂದಾಯ ನಿರೀಕ್ಷಕ ಲೀಲಾನಂದ ಇದ್ದರು.
ಸರ್ಕಾರಿ ಜಮೀನನ್ನು ಜನರೇ ಹಂಚಿಕೆ ಮಾಡಿಕೊಳ್ಳಲು ಅವಕಾಶವಿಲ್ಲ. ಅಕ್ರಮವಾಗಿ ಜಮೀನು ಪ್ರವೇಶ ಮಾಡಿದವರೆಲ್ಲರೂ ತೆರವು ಮಾಡಬೇಕು.
-ಎಂ.ಕೆ.ಶ್ರುತಿ ಉಪ ವಿಭಾಗಾಧಿಕಾರಿ
‘ಅರ್ಹರಿಗೆ ಮಾತ್ರ ಜಮೀನು ಮಂಜೂರಿ’
ಸರ್ಕಾರಿ ಜಮೀನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಮಾತು ಕೇಳಬೇಕು. ಶಾಂತಿಯಿಂದ ಇದ್ದರೆ ಮಾತ್ರ ಗ್ರಾಮದಲ್ಲಿ ನೆಮ್ಮದಿ ಕಾಣಬಹುದು. ಸರ್ಕಾರಿ ಜಮೀನಿನ ರಕ್ಷಣೆಗೆ ಬಂದಿದ್ದೇವೆ. ಜಮೀನನ್ನು ಯಾರೂ ಬಳಕೆ ಮಾಡಿಕೊಳ್ಳಬೇಡಿ ಎಂದು ತಹಶೀಲ್ದಾರ್ ಎಂ.ಮಮತಾ ತಿಳಿಸಿದರು. ಪರಸ್ಪರ ಘರ್ಷಣೆ ಬೆದರಿಕೆ ಮೊದಲಾದ ದೂರುಗಳಿದ್ದರೆ ಪೊಲೀಸರು ಬಗೆಹರಿಸುತ್ತಾರೆ. ಗ್ರಾಮದ ಶಾಂತಿಗೆ ಧಕ್ಕೆ ತಂದರೆ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ. ದರಖಾಸ್ತಿನಲ್ಲಿ ಅರ್ಜಿ ಸಲ್ಲಿಸಿದ್ದರೆ ಸಮಿತಿ ರಚನೆಯಾದ ನಂತರ ವಿಲೇವಾರಿ ಮಾಡುತ್ತೇವೆ. ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಎಲ್ಲರಿಗೂ ಜಮೀನು ದೊರಕುವುದಿಲ್ಲ. ಅರ್ಹರಿಗೆ ಮಾತ್ರ ಜಮೀನು ಮಂಜೂರಾತಿ ದೊರಕುತ್ತದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.