ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ; ಕಾನೂನು ಹೋರಾಟದ ಎಚ್ಚರಿಕೆ

ಡಿ.ಸಿ ಆದೇಶ ಧಿಕ್ಕರಿಸಿದ ನಗರಸಭೆ ಅಧ್ಯಕ್ಷ: ಸದಸ್ಯರ ಆರೋಪ
Last Updated 16 ಮಾರ್ಚ್ 2022, 16:22 IST
ಅಕ್ಷರ ಗಾತ್ರ

ಹಾಸನ: ‘ನಗರಸಭೆಯಲ್ಲಿ ಹಿಂದೆ ನಡೆದಿರುವ ಸಾಮಾನ್ಯ ಸಭೆಯವಿಷಯಗಳನ್ನು ಪುನಃ ಚರ್ಚಿಸಿ ನಿಯಮಾನುಸಾರ ಕ್ರಮವಹಿಸುವಂತೆಜಿಲ್ಲಾಧಿಕಾರಿ ಸೂಚಿಸಿದ್ದರೂ, ನಗರಸಭೆ ಅಧ್ಯಕ್ಷಮೋಹನ್‌ ಧಿಕ್ಕರಿಸಿದ್ದಾರೆ’ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಸದಸ್ಯಗಿರೀಶ್ ಚನ್ನವೀರಪ್ಪ, ‘ಅಧ್ಯಕ್ಷರ ನಡೆಯನ್ನು ಪ್ರಶ್ನಿಸಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇವೆ. ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲೂ ನ್ಯಾಯ ಸಿಗದಿದ್ದರೆ ಡಿ.ಸಿ ಕಚೇರಿ, ನಗರಸಭೆ ಎದುರು ಧರಣಿ ನಡೆಸುವುದಲ್ಲದೆ ಕಾನೂನು ಹೋರಾಟ ಸಹ ಮಾಡುವುದಾಗಿ’ ಎಚ್ಚರಿಸಿದರು.

‘ಫೆ. 28 ರಂದು ನಡೆದ ಸಾಮಾನ್ಯ ಸಭೆ ಬಗ್ಗೆ 17 ಜೆಡಿಎಸ್ ಸದಸ್ಯರು, ತಲಾ ಇಬ್ಬರು ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರು ವಿರೋಧ ವ್ಯಕ್ತಪಡಿಸಿ ದೂರು ಸಲ್ಲಿಸಿದ ಹಿನ್ನೆಲೆ, ಅಂದಿನ ಸಭೆಯ ವಿಷಯಗಳನ್ನು ನಿಯಮಾನುಸಾರ ಮತ್ತೆ ಚರ್ಚಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪೌರಾಯುಕ್ತರು ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ’ ಎಂದರು.

ಇದಕ್ಕೆ ಉತ್ತರ ನೀಡಿರುವ ಅಧ್ಯಕ್ಷರು, ‘ಜಿಲ್ಲಾಧಿಕಾರಿ ಅವರ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಫೆ.28 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆರಂಭದಿಂದ ಕಡೆಯವರೆಗೂ ಮೂರನೇ ಒಂದಕ್ಕಿಂತ ಹೆಚ್ಚು
ಸದಸ್ಯರು ಸಭೆಯಲ್ಲಿ ಹಾಜರಿದ್ದ ಕಾರಣ ಸಭೆ ಊರ್ಜಿತವಾಗಿರುತ್ತದೆ.ಕಲಂ 52 ರಂತೆ ಅಗತ್ಯಪಡಿಸಿದ ಎಲ್ಲಾ ವಿಷಯಗಳನ್ನು ಹಾಜರಿದ್ದ ಸದಸ್ಯರಮತ ಚಲಾಯಿಸುವ ಮೂಲಕ ತೀರ್ಮಾನಿಸಲಾಗಿದೆ. ಕಲಂ 53 ರಂತೆ ವಿಶೇಷ ಸಾಮಾನ್ಯ ಸಭೆ ಸಂದರ್ಭದಲ್ಲಿ ಬರಹದಲ್ಲಿನ ಕೋರಿಕೆಯಂತೆ ಚರ್ಚೆ ಮಾಡುವ ವಿಷಯಗಳನ್ನು ನಮೂದಿಸಲಾಗಿದೆ. ಕಲಂ 57 ರ ಪ್ರಕಾರ ನಿಯಮಾನುಸಾರ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಮಾರ್ಪಾಡುಗಳು ಇದ್ದಲ್ಲಿ ಮೂರು ತಿಂಗಳ ನಂತರ ಪರಿಶೀಲಿಸಬಹುದಾಗಿದೆ’ ಎಂದಿದ್ದಾರೆ.

ಆದರೆ, ಸಭೆಯಲ್ಲಿ ಜೆಡಿಎಸ್ ಸದಸ್ಯರ ಸಹಿ ಪಡೆದಿಲ್ಲ. ಅವರು ಯಾವುದೇ ತಪ್ಪು ಮಾಡದೇ ಇದ್ದರೆ ಮತ್ತೆ ಕರೆಯಬಹುದಿತ್ತು. ಏಕೆ ಕರೆಯಲಿಲ್ಲ, ಡಿಸಿ ಸೂಚನೆ ಏಕೆ ಪಾಲನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಕೆಟ್ಟು ನಿಂತಿರುವಟ್ರ್ಯಾಕ್ಟರ್‌, ಡೀಸೆಲ್ ಬಿಲ್, ಜಿಪಿಎಸ್ ಅಳವಡಿಸಿ ಬಿಲ್ ಪಡೆಯಲಾಗುತ್ತಿದೆ.ಯಾವುದಕ್ಕೂ ಲೆಕ್ಕಪತ್ರ ಇಲ್ಲ ಎಂದು ಕಿಡಿ ಕಾರಿದರು.

ಜೆಡಿಎಸ್ ಮುಖಂಡ ಕಮಲ್ ಕುಮಾರ್ ಮಾತನಾಡಿ, ನಗರಸಭೆ ಅನುಮತಿ ಪಡೆಯದೆ ಹತ್ತಾರು ಕಾಮಗಾರಿ ನಡೆಯುತ್ತಿವೆ. ಇದನ್ನು ನಡೆಸುತ್ತಿರುವವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ರಸ್ತೆ, ಸ್ವತ್ತಿನ ಮೇಲೆ ನಿಯಂತ್ರಣ ಇಲ್ಲದೇ ಹೋದರೆ ನಗರಸಭೆ ದಿವಾಳಿಯಾಗಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಎಸ್.ಎಚ್.ವಾಸುದೇವ್,ಸಯ್ಯದ್ ಅಕ್ಬರ್, ಅಕ್ಮಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT