ಭಾನುವಾರ, ಸೆಪ್ಟೆಂಬರ್ 20, 2020
24 °C
ಬೇಡಿಕೆ ಈಡೇರಿಕೆಗಾಗಿ ಅಂಗನವಾಡಿ ನೌಕರರ ಪ್ರತಿಭಟನೆ‌

‌ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ತರಗತಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆ ನಡೆಸಿದರು.

‌ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನೂರಾರು ನೌಕರರು ತುಂತುರು ಮಳೆ ನಡುವೆಯೇ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಲವರು ಮಳೆಯಿಂದ ರಕ್ಷಣೆ ಪಡೆಯಲು ಕೊಡೆ ಆಶ್ರಯಿಸಿದರು.

ಬಾಕಿ ಇರುವ ಗೌರವಧನ, ಕೋಳಿ ಮೊಟ್ಟೆ, ತರಕಾರಿ ಹಣದ ಬಿಡುಗಡೆಗಾಗಿ ಮತ್ತು ಕೇಂದ್ರ ಸರ್ಕಾರ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಹೆಚ್ಚಳ ಮಾಡಿದ ಗೌರವ ಧನ ಬಿಡುಗಡೆ ಮಾಡಬೇಕು. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್.ಐ.ಸಿ ಆಧಾರಿತ ಪಿಂಚಣಿ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್.ಪಿ.ಎಸ್ ಮಾನದಂಡ ಅನುಸರಿಸಬೇಕು, ನಿವೃತ್ತಿಯಾದ ಕಾರ್ಯಕರ್ತೆ, ಸಹಾಯಕಿಗೆ ಇಡುಗಂಟು ತಕ್ಷಣ ಬಿಡುಗಡೆ ಆಗಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತೆ, ಸಹಾಯಕಿಯರಿಗೆ ಪ್ಯಾನ್‌ ಕಾರ್ಡ್‌ ನೀಡಬೇಕು. 2016ರ ಏಪ್ರಿಲ್ ನಿಂದ ಆಯ್ಕೆಯಾದ ಕಾರ್ಯಕರ್ತೆ, ಸಹಾಯಕಿಯರಿಗೆ ಕಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು.. ಈಗಾಗಲೇ ನಿವೃತ್ತಿ ಆದವರಿಗೆ ಕನಿಷ್ಠ ₹ 3 ಸಾವಿರ ಪಿಂಚಣಿ ನೀಡಬೇಕು. ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು. ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಎಲ್‌ಕೆಜಿ, ಯುಕೆಜಿ ಪ್ರಾರಂಭಿಸದಂತೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು, ಶಿಫಾರಸ್ಸಿನ ಪ್ರಕಾರ ₹ 18 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ಹೊರ ರಾಜ್ಯಗಳಂತೆ ಕರ್ನಾಟಕದಲ್ಲೂ ಗೌರವಧನ ಹೆಚ್ಚಿಸಬೇಕು. ಮಾತೃಪೂರ್ಣ ಯೋಜನೆಯ ನಂತರ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ ಶೇಕಡಾ 75 ಹೆಚ್ಚಿಸಬೇಕು ಎಂದರು.

ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಮಿತಿ ಸಡಿಲಿಸಬೇಕು. ಖಾಲಿಯಿರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ತುಂಬಬೇಕು. ಹಲವು ಯೋಜನೆಗಳಿಗೆ ಡಿಡಿ, ಡಿಓ, ಸಿಡಿಪಿಓ, ಮೇಲ್ವಿಚಾರಕಿಯರನ್ನು ಕಾಯಂ ಆಗಿ ನೇಮಕ ಮಾಡಬೇಕು. ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್ಸು ಆಗಬೇಕು. ಅಂಗನವಾಡಿ ನೌಕರರು ಇಲಾಖಾ ಕೆಲಸಗಳಿಗಾಗಿ ಓಡಾಡುವಾಗ ಆಗುವ ಅಪಘಾತಗಳಿಗೆ ಪರಿಹಾರ ನೀಡಬೇಕು. 5 ವರ್ಷ ಪೂರೈಸಿದ ಮೇಲ್ವಿಚಾರಕಿಯರನ್ನು ಕಡ್ಡಾಯ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಖಜಾಂಚಿ ಶೈಲಜಾ, ನಾಗರತ್ನ, ನಾಗಲಕ್ಷ್ಮಿ, ಕೆ.ಪಿ.ವೀಣಾ, ಟಿ.ಎಚ್‌.ಜಯಂತಿ, ಶಾರದಾಂಬ, ಸಾವಿತ್ರಿ, ಇಂದ್ರಮ್ಮ , ಸಿಐಟಿಯುನ ಅರವಿಂದ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು