ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲದಲ್ಲೇ ಉಳಿದ ಮೆಣಸಿನಕಾಯಿ

ಕೋವಿಡ್‌ ಲಾಕ್‌ಡೌನ್‌ ಪರಿಣಾಮ: ಬೇಡಿಕೆಯೂ ಇಲ್ಲ– ಮಾರುಕಟ್ಟೆಯಲ್ಲಿ ದರವೂ ಕುಸಿತ
Last Updated 29 ಮೇ 2021, 16:46 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಮಾರುಕಟ್ಟೆಯಲ್ಲಿ ದರ ಕುಸಿದಿದ್ದು, ಹಸಿರು ಮೆಣಸಿನಕಾಯಿ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ, ಸತ್ತಿಗಾಲ, ಜಾನೆಕೆರೆ, ಲಕ್ಷ್ಮೀಪುರ, ಬಿಳುತಾಳು, ಕ್ಯಾನಹಳ್ಳಿ, ಶುಕ್ರವಾರಸಂತೆ, ಬಾಳ್ಳುಪೇಟೆ, ಹೆತ್ತೂರು ಸುತ್ತಮುತ್ತ ಹಾಗೂ ಆಲೂರು, ಬೇಲೂರು ತಾಲ್ಲೂಕಿನಲ್ಲಿ ಹಸಿರು ಮೆಣಸಿನಕಾಯಿ, ಬೀನ್ಸ್ ಹಾಗೂ ಇತರೆ ತರಕಾರಿಗಳನ್ನು ಬೇಸಿಗೆಯಲ್ಲಿ ಬೆಳೆಯಲಾಗುತ್ತದೆ. ಲಾಕ್‌ಡೌನ್ ಆರಂಭಕ್ಕೂ ಮೊದಲು ಹಾಗೂ ನಂತರದ ಒಂದು ವಾರ ಮನೆ ಬಾಗಿಲಿಗೆ ಬಂದು ಮೆಣಸಿನಕಾಯಿ ಖರೀದಿ ಮಾಡುತ್ತಿದ್ದ ವ್ಯಾಪಾರಿಗಳು ಈಗ ಗ್ರಾಮಗಳತ್ತ ಸುಳಿಯುತ್ತಲೇ ಇಲ್ಲ. ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಬಹುತೇಕ ರೈತರು ಮಣಸಿನಕಾಯಿ ಕೊಯ್ಲು ಮಾಡದೆ ಹೊಲ ಗದ್ದೆಗಳಲ್ಲಿ ಹಾಗೆಯೇ ಬಿಟ್ಟಿದ್ದಾರೆ.

ಕೋವಿಡ್‌ ಲಾಕ್‌ಡೌನ್ ಆರಂಭಕ್ಕೂ ಮುನ್ನ ಹಸಿರು ಮೆಣಸಿನಕಾಯಿ ಒಂದು ಕೆ.ಜಿ ಗೆ ₹ 25 ರಿಂದ ₹ 30ರವರೆಗೂ ಮಾರಾಟವಾಗುತ್ತಿತ್ತು. ಲಾಕ್‌ಡೌನ್‌ ಬಳಿಕ ಹಬ್ಬ, ಜಾತ್ರೆ, ಹೋಟೆಲ್‌ ಬಂದ್‌ ಮಾಡಲಾಗಿದೆ. ನಿತ್ಯ ನಡೆಯುತ್ತಿದ್ದ ತರಕಾರಿ ಮಾರುಕಟ್ಟೆಯನ್ನು ಬಂದ್‌ ಮಾಡಿ ವಾರದಲ್ಲಿ ಮೂರು ದಿನ ಮಾತ್ರವೇ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಮದುವೆ ಸಮಾರಂಭಕ್ಕೂ 40 ಜನರ ಮಿತಿ ಹೇರಲಾಗಿದೆ ಇದರಿಂದ ಹಸಿರು ಮೆಣಸಿನಕಾಯಿಗೆ ಬೇಡಿಕೆ ಕುಸಿತವಾಗಿದೆ. ಪ್ರಸ್ತುತ ಒಂದು ಕೆ.ಜಿ ಹಸಿರು ಮೆಣಸಿನಕಾಯಿ ₹ 5 ರಿಂದ ₹ 6ಗೆ ಮಾರಾಟವಾಗುತ್ತಿದೆ.

ಬಹುತೇಕ ಗ್ರಾಮಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಅನೇಕ ಮನೆಗಳಲ್ಲಿ ಕೂಲಿ ಕಾರ್ಮಿಕರೇ ಸೋಂಕಿತರಾಗುತ್ತಿದ್ದಾರೆ. ಇದರಿಂದ ಮೆಣಸಿನಕಾಯಿ ಕೊಯ್ಲಿಗೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಹೊರಗಿನಿಂದ ಕರೆಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ಮನೆಯವರೇ ಕೊಯ್ಲು ಮಾಡುತ್ತಿದ್ದಾರೆ. ಮತ್ತೆ ಕೆಲವರು ಕೊಯ್ಲು ಮಾಡುವುದನ್ನೇ ಬಿಟ್ಟಿದ್ದಾರೆ.

ಮಲೆನಾಡು ಭಾಗದ ಪ್ರಮುಖ ಸಮಸ್ಯೆಯಾದ ಕಾಡಾನೆಗಳ ಸಮಸ್ಯೆಗಳ ನಡುವೆಯೂ ಬೆಳೆ ಬೆಳೆದ ರೈತರು ಅಲ್ಪ ಸ್ವಲ್ಪ ಲಾಭ ನೋಡುವಷ್ಟರಲ್ಲಿ ಮಳೆ ಹಾಗೂ ಬೆಲೆ ಕುಸಿತ ರೈತರನ್ನು ಕಂಗಾಲು ಮಾಡಿದೆ. ಕೆಲವು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆಯಿಂದ ಗದ್ದೆಗಳಲ್ಲಿ ನೀರು ನಿಂತು ಹೆಚ್ಚು ಶೀತವಾದ್ದರಿಂದ ಮೆಣಸಿನ ಗಿಡಗಳು ಸಾಯುತ್ತಿವೆ.

‘ಕಳೆದ ವರ್ಷವೂ ಮೊದಲನೇ ಅಲೆಯ ಸಂದರ್ಭದಲ್ಲಿಯೂ ಲಾಕ್‌ಡೌನ್‌ ಮಾಡಿದ್ದರಿಂದ ಬೆಲೆ ಕುಸಿತವಾಗಿತ್ತು. ಈ ಬಾರಿ ಉತ್ತಮ ಆದಾಯ ಬರಬಹುದು ಎಂಬ ನಿರೀಕ್ಷೆಇತ್ತು. ಆದರೆ ಪುನಃ ಲಾಕ್‌ಡೌನ್ ಮಾಡಿದ್ದರಿಂದ ಮತ್ತೆ ಬೆಲೆ ಕುಸಿತ ವಾಗಿದೆ. ಆರಂಭದ ಎರಡು ಕೊಯ್ಲು ಉತ್ತಮ ಬೆಲೆ ಸಿಕ್ಕಿತು ಆದರೂ ನಂತರ ಬೆಲೆ ಕುಸಿತವಾಯಿತು’ ಎಂದು ಸಕಲೇಶಪುರ ತಾಲ್ಲೂಕು ಕೊಣ್ಣೂರು ಗ್ರಾಮದ ರೈತರಾದ ಕೃಷ್ಣಯ್ಯ, ಕುಮಾರ್‌, ಮೋಹನ್‌, ಕಾಳಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT