ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು ತಾಲ್ಲೂಕಿನಲ್ಲೇ ಹೆಚ್ಚು ಹಾನಿ

ಮಳೆಹಾನಿ ಪರಿಹಾರಕ್ಕೆ ಜಿಲ್ಲೆಗೆ ₹2 ಕೋಟಿ ಬಿಡುಗಡೆ: ಸಚಿವ ಗೋಪಾಲಯ್ಯ
Last Updated 14 ಜುಲೈ 2022, 4:16 IST
ಅಕ್ಷರ ಗಾತ್ರ

ಕೊಣನೂರು: ಮಳೆಯಿಂದಾಗಿ ಜಿಲ್ಲೆಯಲ್ಲಿ ಒಂದು ವಾರದಲ್ಲಿ 160 ಕ್ಕಿಂತ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಅರಕಲಗೂಡು ತಾಲ್ಲೂಕಿನಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕೆ. ಸಚಿವ ಗೋಪಾಲಯ್ಯ ತಿಳಿಸಿದರು.

ರಾಮನಾಥಪುರ ಹೋಬಳಿಯಲ್ಲಿ ರಾಮನಾಥಪುರ, ಕೇರಳಾಪುರದ ಬಸವನಹಳ್ಳಿಯಲ್ಲಿ, ಬಸವನಹಳ್ಳಿಕೊಪ್ಪಲು ಗ್ರಾಮಗಳಲ್ಲಿ ಹಾನಿಗೊಳಗಾಗಿರುವ ಮನೆಗಳನ್ನು ವೀಕ್ಷಿಸಿ, ಬಸವನಹಳ್ಳಿಯ 5 ಮನೆಗಳ ಮಾಲೀಕರಿಗೆ ತಲಾ ₹10 ಸಾವಿರ ಪರಿಹಾರದ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.

ಮಳೆಯಿಂದಾಗಿ ಮನೆ ಸಂಪೂರ್ಣ ಹಾನಿಗೊಳಗಾಗಿರುವವರಿಗೆ ₹5 ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಮುಖ್ಯಮಂತ್ರಿಗಳ ತೀರ್ಮಾನದಂತೆ ತಕ್ಷಣದಲ್ಲಿ ₹10 ಸಾವಿರ, ವರದಿ ಪಡೆದ 2 ದಿನಗಳಲ್ಲಿ ₹1 ಲಕ್ಷ ಮತ್ತು ಉಳಿದ ₹4 ಲಕ್ಷ ಮೂರು ಕಂತುಗಳಲ್ಲಿ ನೀಡಲಾಗುವುದು. ಭಾಗಶಃ ಹಾನಿಯಾಗಿರುವ ಮನೆಗಳಿಗೆ ₹3 ಲಕ್ಷ ರೂ ಪರಿಹಾರ ನೀಡಲಾಗುವುದು. ಮಳೆ ಹಾನಿ ನಿರ್ವಹಣೆಗಾಗಿ ಜಿಲ್ಲೆಗೆ ₹2 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಮಳೆಯಿಂದ ಹಾನಿಯಾಗಿರುವ ತಂಬಾಕು, ಆಲೂಗೆಡ್ಡೆ, ನೆಲಗಡಲೆ ಸೇರಿದಂತೆ ಇನ್ನಿತರ ಬೆಳೆಗಳ ಸಂಪೂರ್ಣ ವರದಿಯನ್ನು ಪಡೆದು ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು. ಕಳೆದ ಶುಕ್ರವಾರ ಜಿಲ್ಲೆಯಲ್ಲಿ 40 ಹೆಕ್ಟೇರ್ ಪ್ರದೇಶ ಹಾನಿಯಾಗಿತ್ತು. ಮಳೆ ನಿಂತ ನಂತರ ಪೂರ್ಣ ಪ್ರಮಾಣದ ಹಾನಿಯ ವರದಿ ಗೊತ್ತಾಗುತ್ತದೆ ಎಂದರು.

ಹೊಳೆನರಸೀಪುರ ತಾಲ್ಲೂಕಿನಲ್ಲಿ 29 ಮನೆಗಳಿಗೆ ಹಾನಿಯಾಗಿದ್ದು, ಅಲ್ಲಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಅರಕಲಗೂಡು ತಾಲ್ಲೂಕಿನಲ್ಲಿ 80ಕ್ಕೂ ಹೆಚ್ಚು, ಸಕಲೇಶಪುರ, 19, ಚನ್ನರಾಯಪಟ್ಟಣದಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ಮಳೆಯ ಪ್ರಮಾಣ ಹೆಚ್ಚಿರುವ ಸ್ಥಳಗಳಿಗೆ ಅಧಿಕಾರಿಗಳು ತಕ್ಷಣ ಭೇಟಿ ಕೊಡಬೇಕು. ಹಾನಿಯಾದ 2 ದಿನಗಳಲ್ಲಿ ಫೋಟೋ ಸಮೇತ ವರದಿ ನೀಡಬೇಕು. ಅಧಿಕಾರಿಗಳು ವರದಿ ನೀಡುವ ಮತ್ತು ಪರಿಹಾರ ನೀಡುವ ಕೆಲಸವನ್ನು ಶೀಘ್ರದಲ್ಲಿ ಮಾಡುವಂತೆ ಆದೇಶಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು, ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್, ಬಿಜೆಪಿ ಮುಖಂಡ ಎಚ್. ಯೋಗಾ ರಮೇಶ್, ಪೊಲೀಸ್, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT