ಮಕ್ಕಳ ‘ಕನಸು’ ನನಸಿಗಾಗಿ ಓಟ

7
ಸ್ಪರ್ಧಿಗಳಿಗೆ ಉಚಿತ ಸಸಿ, ಪಾನೀಯ ವಿತರಣೆ

ಮಕ್ಕಳ ‘ಕನಸು’ ನನಸಿಗಾಗಿ ಓಟ

Published:
Updated:
Prajavani

ಹಾಸನ : ನಗರದ ‘ಕನಸು’ ಬುದ್ದಿಮಾಂದ್ಯ ಶಾಲೆಯ ಮಕ್ಕಳಿಗೆ ಸಹಾಯ ಹಸ್ತ ಚಾಚಲು ಯುವಕ, ಯುವತಿಯರು, ಕ್ರೀಡಾಪಟುಗಳು, ಅಧಿಕಾರಿಗಳು ರಸ್ತೆಗಿಳಿದು ಓಡಿದರು.

ಸ್ಕಂದ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್, ರನ್‌ ಫಾರ್‌ ಸ್ವೆಟ್‌, ವಿದ್ಯಾಸಿರಿ ಶಿಕ್ಷಣ ಸಂಸ್ಥೆ, ಆಮಂತ್ರಣ ಆಫ್‌ಸೆಟ್ ಆಶ್ರಯದಲ್ಲಿ ಆಯೋಜಿಸಿದ್ದ 5 ಕೆ ಮ್ಯಾರಥಾನ್‌ನಲ್ಲಿ 200ಕ್ಕೂ ಅಧಿಕ ಮಂದಿ ಓಟದ ಮೂಲಕ ನೆರವಾದರು.

ಮಂಜು ಮುಸುಕಿದ ಆವರಣ. ಸೂರ್ಯನ ಕಿರಣಗಳು ಭೂಮಿ ಸ್ಪರ್ಶಿಸುವ ಮೊದಲೇ ಆರಂಭವಾದ ಮ್ಯಾರಥಾನ್‌ನಲ್ಲಿ ‘ಗುರಿ’ ಮುಟ್ಟಿದವರು ಬಹುಮಾನ ಗೆದ್ದುಕೊಂಡರೆ, ತಡವಾಗಿ ಅಂತಿಮ ಗೆರೆ ತುಳಿದವರು ನಿಟ್ಟುಸಿರುಬಿಟ್ಟರು.
ಆರಂಭದಲ್ಲಿ ಹಲವರು ಮುಗ್ಗರಿಸಿದರೆ, ಮತ್ತೆ ಕೆಲವರು ಅರ್ಧ ದಾರಿಗೆ ಅಂತ್ಯಗೊಳಿಸಿದರು. ಎಳೆಯ ಮಕ್ಕಳು ಹಾಗೂ ಹಿರಿಯರು ಮ್ಯಾರಾಥನ್‌ಲ್ಲಿ ಭಾಗವಹಿಸಿ ಗಮನ ಸೆಳೆದರು. ಹಲವು ಕಡೆ ಸ್ಪರ್ಧಿಗಳಿಗೆ ಉತ್ಸಾಹ ತುಂಬಲು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಕೆಲವೇ ನಿಮಿಷಗಳಲ್ಲಿ ಓಟ ನಿಲ್ಲಿಸಿ ರಸ್ತೆ ಬದಿ ವಿಶ್ರಾಂತಿ ಪಡೆದರು.

ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ 5 ಕಿ.ಮೀ. ಮ್ಯಾರಥಾನ್‌ಗೆ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ ಹಸಿರು ನಿಶಾನೆ ತೋರಿ, ತಾವೂ ಸ್ವಲ್ಪ ದೂರ ಓಡಿದರು.

ಎಂ.ಜಿ.ರಸ್ತೆ, ಶಂಕರಮಠ ರಸ್ತೆ, ಬಿ.ಎಂ.ರಸ್ತೆ, ನಗರ ಬಸ್ ನಿಲ್ದಾಣ ರಸ್ತೆ, ಹೇಮಾವತಿ ಪ್ರತಿಮೆ, ಸಾಲಗಾಮೆ ರಸ್ತೆ ಮೂಲಕ ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಗುರಿ ಮುಟ್ಟಿದ ಮೊದಲ ನೂರು ಸ್ಪರ್ಧಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ಉಚಿತವಾಗಿ ನೀಡಲಾಯಿತು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಪ್ರಕಾಶ್ ಗೌಡ ಮಾತನಾಡಿ, ‘ಪ್ರತಿಯೊಬ್ಬರು ನಿತ್ಯ ಬೆಳಗ್ಗೆ ಓಡುವ ಹವ್ಯಾಸ ಬೆಳಸಿಕೊಳ್ಳಬೇಕು. ಓಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ. ಅಲ್ಲದೆ ಇಡೀ ದಿನ ಲವಲವಿಕೆಯಿಂದ ಇರಬಹುದು. ನಗರದ ‘ಕನಸು’ ಬುದ್ಧಿ ಮಾಂದ್ಯ ಮಕ್ಕಳ ಶಾಲೆ ನೆರವಿಗಾಗಿ ಮ್ಯಾರಥಾನ್ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !