ಹಿರೀಸಾವೆ: ಹೋಬಳಿಯ ಕಾವಲಬಾರೆ (ಮಾಚಬೂನಹಳ್ಳಿ)ಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನ್‌ಗೆ ಬುಧವಾರ ಗಂಡು ಚಿರತೆ ಸೆರೆಯಾಗಿದೆ.
ಗ್ರಾಮದಲ್ಲಿ ಮಂಗಳವಾರ ರಾತ್ರಿ ಕುಮಾರ್ ಎಂಬುವವರಿಗೆ ಸೇರಿದ್ದ ಕುರಿಯನ್ನು ಅರ್ಧ ತಿಂದು ಅಲ್ಲೇ ಬಿಟ್ಟು ಹೋಗಿತ್ತು. ಕುರಿಯ ಉಳಿದ ಭಾಗವನ್ನು ಗ್ರಾಮದ ಯುವಕರು ಬೋನಿಗೆ ಹಾಕಿದ್ದರು. ಅದನ್ನು ತಿನ್ನಲು ಹೋಗಿ ಸೆರೆಸಿಕ್ಕಿದೆ.
ಪಶುವೈದ್ಯಾಧಿಕಾರಿ ಶ್ರೀಧರ್ ತಪಾಸಣೆ ನಡೆಸಿದರು.
‘ಸುಮಾರು ನಾಲ್ಕು ವರ್ಷದ ಗಂಡು ಚಿರತೆಯು ಆರೋಗ್ಯವಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಟ್ಟ ಅರಣ್ಯಕ್ಕೆ ಬಿಡಲಾಗುವುದು’ ಎಂದು ಇಲಾಖೆಯ ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದ ನೂರಾರು ಜನರು ಸ್ಥಳಕ್ಕೆ ಆಗಮಿಸಿ, ವೀಕ್ಷಿಸಿದರು ಮತ್ತು ಕೆಲವು ಯುವಕರು ಸೆಲ್ಫಿ ತೆಗೆದುಕೊಂಡರು. ಕಳೆದ ಒಂದು ತಿಂಗಳಲ್ಲಿ ನಾಯಿ, ಕುರಿ, ಕರುಗಳು ಸೇರಿದಂತೆ 10ಕ್ಕೂ ಹೆಚ್ಚು ಸಾಕು ಪ್ರಾಣಿಗಳು ಚಿರತೆದಾಳಿಗೆ ಬಲಿಯಾಗಿವೆ. ಹೋಬಳಿಯಲ್ಲಿ ಇನ್ನೂ ಚಿರತೆಗಳು ಇವೆ, ಅವುಗಳನ್ನು ಸಹ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.