ಭಾನುವಾರ, ಆಗಸ್ಟ್ 18, 2019
23 °C
ಎರಡು ಸಾವಿರ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ: ಡಿ.ಸಿ

ಹಾಸನದಲ್ಲಿ ಮಳೆಗೆ ₹150 ಕೋಟಿ ನಷ್ಟ

Published:
Updated:
Prajavani

ಹಾಸನ: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ ಅಂದಾಜು ₹ 150 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.

ನೆರೆ ಪೀಡಿತ ಆರು ತಾಲ್ಲೂಕುಗಳಲ್ಲಿ ವಿವಿಧ ಬೆಳೆ, ಮನೆಗಳು, ರಸ್ತೆ, ಸೇತುವೆ, ಕಟ್ಟಡಗಳು, ಸಾರ್ವಜನಿಕ ಆಸ್ತಿ–ಪಾಸ್ತಿಗೆ ಹಾನಿಯಾಗಿದೆ. ಮಳೆ‌ ಹಾನಿ ಸಮೀಕ್ಷಾ ಕಾರ್ಯ ಪ್ರಾರಂಭವಾಗಿದ್ದು, 2-3 ದಿನಗಳಲ್ಲಿ ನಿಖರ ಅಂದಾಜು ತಿಳಿಯಲಿದೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಅತಿವೃಷ್ಟಿಯಿಂದ ಒಂದು ಸಾವು ಸಂಭವಿಸಿದೆ. ಜಿಲ್ಲಾಡಳಿತ ಪ್ರವಾಹ ನಿರ್ವಹಣೆಗಾಗಿ ಅಗತ್ಯ ಮಂಜಾಗ್ರತಾ ಕ್ರಮವಹಿಸಿದ್ದು, ಮುನ್ನೆಚ್ಚರಿಕೆಯಿಂದ ಜಿಲ್ಲಾದ್ಯಂತ 2 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.

ನಿರಾಶ್ರಿತರಿಗೆ ಪೂರಕವಾದ ಊಟೋಪಚಾರ, ವಸತಿ, ಆಹಾರದ ಕಿಟ್, ತಾತ್ಕಾಲಿಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 500 ಮನೆಗೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾಗಿದೆ. ಎಲ್ಲಾ ನಷ್ಟಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲಾಗುತ್ತಿದ್ದು, ಶೀಘ್ರವೇ ಪರಿಹಾರ ವಿತರಿಸಲಾಗುವುದು ಎಂದು ನುಡಿದರು.

ಮಳೆ ಬಿಡುವು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಸಂಪೂರ್ಣ ಕಡಿಮೆಯಾಗಿದ್ದು, ಎಲ್ಲೆಡೆ ಬಿಸಿಲಿನ ವಾತಾವರಣ ಕಂಡು ಬಂದಿದೆ. ಸಹಜ ಸ್ಥಿತಿಯತ್ತ ಜನ ಜೀವನ ಮರಳುತ್ತಿದೆ.

ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಇಳಿಕೆಯಾಗಿದ್ದು, ಸೋಮವಾರ ಸಂಜೆ ಅಣೆಕಟ್ಟೆಗೆ 23,781 ಕ್ಯುಸೆಕ್‌ ಒಳ ಹರಿವು ಇದ್ದು, ನಾಲೆಗಳಿಗೆ 2800 ಕ್ಯುಸೆಕ್, ನದಿಗೆ 500 ಕ್ಯುಸೆಕ್‌ ಸೇರಿ ಒಟ್ಟು 3,300 ಕ್ಯುಸೆಕ್‌ ಒಳ ಹರಿವು ಇದೆ.

ಸಕಲೇಶಪುರದ ಆಜಾದ್ ರಸ್ತೆಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದ್ದು, ನಿವಾಸಿಗಳು ತಮ್ಮ ಮನೆ, ಅಂಗಡಿ ಮುಂಗಟ್ಟುಗಳಿಗೆ ವಾಪಸ್‌ ಆಗುತ್ತಿದ್ದಾರೆ. ಹೊಳೆನರಸೀಪುರ, ರಾಮನಾಥಪುರ ಮೊದಲಾದ ಕಡೆ ಬಂದ್ ಆಗಿದ್ದ ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿದೆ.

Post Comments (+)