ಮಳೆಗೆ ಶೇ. 80 ರಷ್ಟು ಬೆಳೆ ನಾಶ

7
ಶೀಘ್ರ ಪರಿಹಾರ ಘೋಷಿಸಲು ಸರ್ಕಾರಕ್ಕೆ ಒತ್ತಾಯ

ಮಳೆಗೆ ಶೇ. 80 ರಷ್ಟು ಬೆಳೆ ನಾಶ

Published:
Updated:

ಹಾಸನ : ಸಕಲೇಶಪುರ ಭಾಗದಲ್ಲಿ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಶೇಕಡಾ 80 ರಷ್ಟು ಕಾಫಿ, ಭತ್ತ, ಮೆಣಸು, ಶುಂಠಿ ಬೆಳೆ ನಾಶವಾಗಿದೆ. ಸರ್ಕಾರ ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಎಂದು ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಸಿ.ಎಸ್.ಮಹೇಶ್ ಒತ್ತಾಯಿಸಿದರು.

ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ಕುಸಿಯುವುದು ಮಾತ್ರವಲ್ಲದೆ ಮನೆಗಳಲ್ಲಿ ಜಲ ಉಕ್ಕುತ್ತಿದೆ. ಮಲೆನಾಡು ಭಾಗದ ಸ್ಥಿತಿ ಚಿಂತಾಜನಕವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡರು.

ಹೆತ್ತೂರು ಹೋಬಳಿಯಲ್ಲಿ 182 ಮಿ.ಮೀ. , ಬಿಸ್ಲೆ 289, ಹೆಗ್ಗದ್ದೆ 224, ಕಾಗಿನಹರೆ 310, ಅತ್ತಿಹಳ್ಳಿ 260, ಬ್ಯಾಕರವಳ್ಳಿ 165, ಕ್ಯಾನಹಳ್ಳಿಯಲ್ಲಿ 189, ಹಾನುಬಾಳು 162 ಹಾಗೂ ಕಾಡುಮನೆ ಭಾಗದಲ್ಲಿ 499 ಮಿ.ಮೀ. ಮಳೆಯಾಗಿದೆ. ಕಾಫಿ, ಏಲಕ್ಕಿ, ಮೆಣಸು ಹಾಗೂ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಜನರ ಬದುಕು ದುಸ್ತರವಾಗಿದ್ದರೂ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ತಜ್ಞ ಕಸ್ತೂರಿ ರಂಗನ್ ವರದಿ ಶಿಫಾರಸ್ಸಿನಂತೆ 34 ಗ್ರಾಮಗಳನ್ನು ಪರಿಸರ ಸೂಕ್ಷ್ಮಪ್ರದೇಶಗಳೆಂದು ಘೋಷಿಸುವ ಹುನ್ನಾರ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ವರದಿಯನ್ನು ಗಂಭೀರವಾಗಿ ಪರಿಗಣಿಸಬಾರದು. ರಾಜ್ಯ ಸರ್ಕಾರ ಪಶ್ಚಿಮ ಘಟ್ಟಗಳನ್ನು ಸೂಕ್ಷ್ಮ ಸಂವೇದನ ಪರಿಸರವೆಂದು ಘೋಷಿಸುವ ಕುರಿತು ಇಲ್ಲಿಯವರೆಗೆ ಯಾವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ಕಸ್ತೂರಿ ರಂಗನ್ ವರದಿ ಆಧರಿಸಿ ಮಲೆನಾಡಿನ ಕಾಫಿ ಪ್ರದೇಶ ಸೂಕ್ಷ್ಮಪರಿಸರ ಪ್ರದೇಶಗಳ ಪಟ್ಟಿಗೆ ಸೇರಿದರೆ ರೈತರು ಬದುಕುವುದು ಕಷ್ಟವಾಗುತ್ತದೆ ಹೇಳಿದರು.

ಸಂಘದ ಗೌರವ ಕಾರ್ಯದರ್ಶಿ ಮುರಳೀಧರ ಎಸ್.ಬಕ್ಕರವಳ್ಳಿ, ಮುಖಂಡರಾದ ರಾಜೀವ್, ರವೀಂದ್ರ ಮತ್ತು ಸಚಿನ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !