ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಾಗಾಣೆ ನಿಲ್ಲಿಸಲು ಆಗ್ರಹ

ನಿಡಿಗೆರೆ, ಹಳ್ಳಿ ಬಯಲು ಗ್ರಾಮಸ್ಥರ ಪ್ರತಿಭಟನೆ
Last Updated 4 ಜುಲೈ 2018, 12:30 IST
ಅಕ್ಷರ ಗಾತ್ರ

ಹಾಸನ : ‘ಮರಳು ಲಾರಿಗಳ ಸಂಚಾರದಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಪಡಿಸಿ, ಮಳೆಗಾಲ ಮುಗಿಯುವವರೆಗೂ ಮರಳು ಸಾಗಾಣೆಗೆ ಪರವಾನಗಿ ನೀಡಬಾರದು’ ಎಂದು ಆಗ್ರಹಿಸಿ ಸಕಲೇಶಪುರ ತಾಲ್ಲೂಕಿನ ನಿಡಿಗೆರೆ ಹಾಗೂ ಹಳ್ಳಿಬಯಲು ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಮೂರು ತಿಂಗಳಿಂದ ಸಕಲೇಶಪುರ ತಾಲ್ಲೂಕಿನ ನಿಡಿಗೆರೆ ಹಾಗೂ ಹಳ್ಳಿಬಯಲು ಗ್ರಾಮದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ನಿತ್ಯ ನೂರಾರು ಲಾರಿಗಳು ಮರುಳು ಸಾಗಾಣೆ ಮಾಡುತ್ತಿದ್ದು, ಗ್ರಾಮದ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ರಸ್ತೆಗಳು ಹಾಳಾಗಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಗೊಬ್ಬರ ಹಾಗೂ ಇತರೆ ಕೃಷಿ ಉಪಕರಣಗಳನ್ನು ತೆಗೆದುಕೊಂಡು ಹೋಗಲು ತೀವ್ರ ತೊಂದೆರೆ ಅನುಭವಿಸುವಂತಾಗಿದೆ. ಲಾರಿಗಳ ಸಂಚಾರದಿಂದ ರಸ್ತೆಯ ಪಕ್ಕದಲ್ಲಿದ್ದ ಕೊಳವೆ ಬಾವಿ ಹಾಳಾಗಿದ್ದು, ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ’ ಎಂದು ಗ್ರಾಮಸ್ಥರು ದೂರಿದರು.

‘ಈ ಸಂಬಂಧ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಮರಳು ಸಾಗಾಣೆ ಮಾಡದಂತೆ ರಸ್ತೆ ತಡೆ ನಡೆಸಲಾಗಿದೆ. ಆದರೆ, ಗುತ್ತಿಗೆದಾರರು ಪೊಲೀಸ್ ಸರ್ಪಗಾವಲಿನಲ್ಲಿ ಗ್ರಾಮಸ್ಥರನ್ನು ಬೆದರಿಸಿ ಸಾಗಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಳ್ಳಿ ಬಯಲು ಗ್ರಾಮದ ಸ್ಮಶಾನಕ್ಕೆ ಈ ರಸ್ತೆ ಮೂಲಕವೇ ಹೋಗಬೇಕಿದೆ. ಯಾರಾದರು ಮೃತಪಟ್ಟರೆ ಸ್ಮಶಾನಕ್ಕೆ ಕೊಂಡೊಯ್ಯಲು ಸಾಧ್ಯವಾಗದೆ ರಸ್ತೆ ಪಕ್ಕದಲ್ಲೇ ಶವಸಂಸ್ಕಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಜಾನುವಾರುಗಳನ್ನು ಮೇಯಿಸಲು ಈ ರಸ್ತೆಯಲ್ಲೇ ಹೋಗಬೇಕಿರುವುದರಿಂದ ತೊಂದರೆ ಉಂಟಾಗಿದೆ.’ ಎಂದು ದೂರಿದರು.

‘ಪರವಾನಗಿ ಪಡೆದಿರುವ ಗುತ್ತಿಗೆದಾರರು ಸರ್ಕಾರದ ಯಾವುದೇ ಮಾನದಂಡ ಹಾಗೂ ಷರತ್ತುಗಳನ್ನು ಪಾಲಿಸುತ್ತಿಲ್ಲ. ನಿಯಮದ ಪ್ರಕಾರ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಮರಳು ಗಣಿಗಾರಿಗೆ ನಡೆಸುವಂತೆ ಸೂಚಿಸಲಾಗಿದೆ. ಆದರೆ, ಅಧಿಕಾರಿಗಳೇ ಮುಂದೆ ನಿಂತು ರಾತ್ರಿ ಮರಳು ಗಣಿಗಾರಿಕೆ ನಡೆಸಲು ಅನುವು ಮಾಡಿಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೂಡಲೇ ಗ್ರಾಮದ ರಸ್ತೆಯನ್ನು ದುರಸ್ತಿ ಪಡಿಸಿ ನಂತರ ಮರಳು ಗಣಿಗಾರಿಕೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪರಿವರ್ತನಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ಗೋವಿಂದರಾಜು, ಸಂಯೋಜಕ ಸ್ಟೀವನ್ ಪ್ರಕಾಶ್, ಗ್ರಾಮಸ್ಥರಾದ ಎನ್‌.ಕೆ. ದೇವರಾಜು, ಲಿಂಗರಾಜು, ಕೇಶವಮೂರ್ತಿ, ಪಾರ್ವತಿ, ಸವಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT