ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಸಾಗಾಣಿಕೆಯಲ್ಲಿ ಜಿಪಿಎಸ್ ದುರ್ಬಳಕೆ

ಲಾರಿ ಮಾಲೀಕರಿಂದ ಕಡ್ಡಾಯ ದಂಡ ವಸೂಲಿಗೆ ಡಿಸಿ ಸೂಚನೆ
Last Updated 12 ನವೆಂಬರ್ 2019, 16:43 IST
ಅಕ್ಷರ ಗಾತ್ರ

ಹಾಸನ: ಮರಳು ಸಾಗಿಸುವ ವಾಹನಗಳ ಜಿಪಿಎಸ್ ಅನ್ನು ನಿಷ್ಕ್ರಿಯಗೊಳಿಸಿ ಅಕ್ರಮವಾಗಿ ಮರಳು ಸಾಗಿಸಿದ ಲಾರಿ ಮಾಲೀಕರಿಗೆ ವಿಧಿಸಿರುವ ದಂಡವನ್ನು ಕಡ್ಡಾಯವಾಗಿ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿ, ಕ್ರಷರ್ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮರಳು ಸಾಗಾಣಿಕೆ ವಾಹನಗಳಿಗೆ ಅಳವಡಿಸಿರುವ ಜಿಪಿಎಸ್ ಸಾಧನದ ಸಂಪರ್ಕವನ್ನು 103 ಬಾರಿ 56 ವಾಹನಗಳು ನಿಷ್ಕ್ರಿಯಗೊಳಿಸಿಕೊಂಡು ಸಂಚರಿಸಿವೆ. ಆ ಲಾರಿಗಳ ಜಿಪಿಎಸ್ ನಿರ್ವಹಿಸುವಂತೆ ಮಾಡಬೇಕು. ಜಿಪಿಎಸ್ ಇಲ್ಲದಿರುವ ವಾಹನಗಳಲ್ಲಿ ಮರಳು ಸಾಗಿಸಲು ನೀಡಿರುವ ಪರವಾನಗಿ ರದ್ದು ಮಾಡಬೇಕು ಹಾಗೂ ವಿಧಿಸಿರುವ ದಂಡವನ್ನು ಮತ್ತೊಮ್ಮೆ ಪರಿಶೀಲಿಸಿ ಪಾವತಿ ಮಾಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಅಕ್ರಮ ಮರಳು ಸಾಗಾಣಿಕೆ ಮತ್ತು ಕಲ್ಲು ಗಣಿಗಾರಿಕೆ ನಡೆಯುವ ಜಾಗದಲ್ಲಿ ನಡೆದಿರುವ ಬ್ಲಾಸ್ಟಿಂಗ್ ಕುರಿತು ಸ್ಥಳೀಯರು ನೀಡಿರುವ ದೂರಿನ ಅನ್ವಯ ಉಪವಿಭಾಗಾಧಿಕಾರಿ ಸ್ಥಳ ಪರಿಶೀಲಿಸುವಂತೆ ಗಿರೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಜಾಗಗಳಲ್ಲಿ ಕ್ರಷರ್ ಘಟಕ ಸ್ಥಾಪಿಸಲು ಪರವಾನಗಿ ಕೋರಿರುವವರು ಕಡ್ಡಾಯವಾಗಿ ಕ್ವಾರಿಗಳನ್ನು ಹೊಂದಿದ್ದರಷ್ಟೇ ಅನುಮತಿ ನೀಡುವಂತೆ ಹಾಗೂ ಭೂ ಪರಿವರ್ತನೆಯಾದ ಜಾಗದಲ್ಲಷ್ಟೇ ಕ್ರಷರ್ ಘಟಕ ಚಾಲನೆಗೆ ಅವಕಾಶ ನೀಡುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಮರಳು ಸಾಗಾಣಿಕೆ ಮಾಡುವ ಪ್ರಕರಣಗಳನ್ನು ತಡೆಯುವ ಸಲುವಾಗಿ ಮೊಬೈಲ್ ಸ್ಕ್ವಾಡ್‍ಗಳನ್ನು ಶೀಘ್ರವಾಗಿ ಆರಂಭಿಸಬೇಕು. ಚೆಕ್ ಪೋಸ್ಟ್‌ಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಹಾಗೂ ಜಲ್ಲಿ ಸಾಗಿಸುವ ವಾಹನಗಳಿಗೂ ಜಿಪಿಎಸ್‌ ಅಳವಡಿಸಿ ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕುವಂತೆ ಡಿಸಿ ಅಧಿಕಾರಿಗಳಿಗೆ ನಿರ್ದೇಶನ ನಿಡಿದರು.

ಚೆಕ್ ಪೋಸ್ಟ್ ಮತ್ತು ಮೊಬೈಲ್ ಸ್ಕ್ವಾಡ್‍ಗಳಲ್ಲಿ ಕಾರ್ಯನಿರ್ವಹಿಸುವ ಸ್ಕ್ವಾಡ್‍ಗಳಿಗೆ ಸೂಕ್ತ ತರಬೇತಿ ಕಾರ್ಯಾಗಾರ ನಡೆಸಬೇಕು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೀಡದ ಮರಳು ಗುತ್ತಿಗೆದಾರರಿಗೆ ನೋಟೀಸ್ ನೀಡಿ ಪರವಾನಗಿ ರದ್ದು ಪಡಿಸುವಂತೆ ಅವರು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ಭೂ ವಿಜ್ಞಾನಾಧಿಕಾರಿಗಳು ತಪಾಸಣೆಗೆ ತೆರಳುವಾಗ ಪೊಲೀಸ್ ಇಲಾಖೆಯಿಂದ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ಸಿವರಾಂ ಬಾಬು, ಉಪವಿಭಾಗಾಧಿಕಾರಿ ನವೀನ್ ಭಟ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧೀಕ್ಷಕ ಎಂ.ಕೆ.ಗಿರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT