ಮರು ನೇಮಕಕ್ಕೆ ಹೊರಗುತ್ತಿಗೆ ನೌಕರರ ಆಗ್ರಹ

7
ಅವಧಿಗೂ ಮುನ್ನ ಕೆಲಸದಿಂದ ವಜಾ, ಪ್ರತಿಭಟನೆ

ಮರು ನೇಮಕಕ್ಕೆ ಹೊರಗುತ್ತಿಗೆ ನೌಕರರ ಆಗ್ರಹ

Published:
Updated:
Prajavani

ಹಾಸನ: ಜಿಲ್ಲೆಯ ಪಶುವೈದ್ಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ‘ಡಿ’ ದರ್ಜೆ ನೌಕರರನ್ನು ಅವಧಿಗೂ ಮೊದಲೇ ಕೆಲಸದಿಂದ ತೆಗೆದು ಹಾಕಿರುವ ಕ್ರಮ ಖಂಡಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ ನೌಕರರನ್ನು ಏಕಾಏಕಿ ಟೆಂಡರ್‌ ಅವಧಿ ಮುಗಿಯುವ ಮುನ್ನವೇ ನೋಟಿಸ್ ನೀಡದೆ ಕೆಲಸದಿಂದ ತೆಗೆಯಲಾಗಿದೆ. ರಾಜಕೀಯ ಹಿನ್ನಲೆಯಲ್ಲಿ ಕೆಲವರನ್ನು ಮಾತ್ರ ಕೆಲಸದಲ್ಲಿ ಉಳಿಸಿಕೊಳ್ಳಲಾಗಿದ್ದು, ಇದು ನ್ಯಾಯದ ಉಲ್ಲಂಘನೆಯಾಗಿದೆ. ರಾಜಕೀಯ ಕಾರಣಗಳಿಗೆ ಬಡ ದಲಿತ ನೌಕರರನ್ನು‘ಬಲಿ ಪಶು’ ಮಾಡಲಾಗಿದೆ. ಹಾಗಾಗಿ ಕೆಲಸದಿಂದ ಅಕ್ರಮವಾಗಿ ತೆಗೆದು ಹಾಕಿರುವವರನ್ನು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಮೂರು ವರ್ಷಗಳಿಂದ 131 ನೌಕರರು ಕೆಲಸ ಮಾಡುತ್ತಿದ್ದಾರೆ. ಇವರನ್ನು ಸರ್ಕಾರದ ಆದೇಶದಂತೆ ಧಾರವಾಡದ ಮಾತಾ ಟೆಕ್ನಾಲಜೀಸ್ ಮೂಲಕ ಜಿಲ್ಲೆಯ ಪಶುವೈದ್ಯ ಸಂಸ್ಥೆಗಳಲ್ಲಿ ‘ಡಿ’ ದರ್ಜೆ ನೌಕರರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕೆಲಸದಿಂದ ವಜಾಗೊಳಿಸುವ ಮುನ್ನ ಯಾವುದೇ ಕಾರಣ ಅಥವಾ ನೋಟೀಸ್ ಆಗಲಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿರುವುದರಿಂದ ‘ರಾಜಕೀಯ ದ್ವೇಷದ’ ಭಾಗವಾಗಿ ನೌಕರರನ್ನು ಬಲಿಪಶು ಮಾಡಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇವರ ಸ್ಥಾನಗಳಿಗೆ ಸ್ಥಳೀಯ ರಾಜಕೀಯ ನಾಯಕರ ಶಿಫಾರಸಿನ ಆಧಾರದಲ್ಲಿ ತಮಗೆ ಬೇಕಾದವರಿಗೆ ಮಾತ್ರ ಕೆಲಸ ನೀಡಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಇದೇ ರೀತಿ ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಯಾರನ್ನೂ ಕೆಲಸದಿಂದ ತೆಗೆಯಲಾಗಿಲ್ಲ. ಆದರೆ, ಜಿಲ್ಲೆಯಲ್ಲಿ ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ದೂರಿದರು.

‘ಅನ್ಯಾಯಕ್ಕೊಳಗಾಗಿರುವ ಈ ಬಡ ನೌಕರರಿಗೆ ಕೂಡಲೇ ನ್ಯಾಯ ಕೊಡಿಸಬೇಕು ಹಾಗೂ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವ ಮಾತಾ ಟೆಕ್ನಾಲಜೀಸ್ ವಿರುದ್ಧ ಕಾನೂನು ಕ್ರಮ ಜರುಗಿಸಿ ನೌಕರರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೆಶ್, ಕಾರ್ಯಕರ್ತರಾದ ಯೋಗೇಶ್, ಅನಿಲ್ ಕುಮಾರ್, ವಿಶ್ವನಾಥ್, ಕಾಂತರಾಜು, ಸೋಮೇಶಖರ್, ಅನಂತಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !