ಶನಿವಾರ, ಡಿಸೆಂಬರ್ 14, 2019
23 °C
ತಾಳೆಯಾಗದ ಇಲಾಖೆಗಳ ಅಂಕಿ ಅಂಶ, ಸದಸ್ಯರ ಅಸಮಾಧಾನ

ಮರು ಸಮೀಕ್ಷೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿನ ಬಾಲ ಕಾರ್ಮಿಕರು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕುರಿತು ವಿವಿಧ ಇಲಾಖೆಗಳು ನೀಡಿರುವ ಅಂಕಿ ಅಂಶ ತಾಳೆಯಾಗದ ಕಾರಣ ಮರು ಸಮೀಕ್ಷೆಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂತೋಣಿ ಸಭಾಸ್ಟಿನ್‌ ಹೇಳಿದರು.

ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಡಿರುವ ಅಂಕಿ ಅಂಶ ಸರಿಯಿಲ್ಲ. ಶಿಕ್ಷಣ ಇಲಾಖೆ ದಾಖಲೆ ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 197. ಈ ಪೈಕಿ 77 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಆದರೆ, ಇತರ ಇಲಾಖೆಗಳು ನೀಡಿರುವ ಅಂಕಿ ಅಂಶ ಹೊಂದಾಣಿಕೆಯಾಗುತ್ತಿಲ್ಲ. ಹಾಗಾಗಿ ಒಂದು ತಿಂಗಳೊಳಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಕ್ಕಳು ಶಾಲೆ ಬಿಡಲು ಕಾರಣವೇನು? ಆ ಮಕ್ಕಳನ್ನು ಪತ್ತೆ ಮಾಡಿ ಮತ್ತೆ ಶಾಲೆಗೆ ಸೇರಿಸುವುದು ಶಿಕ್ಷಣ ಇಲಾಖೆ ಕರ್ತವ್ಯ. ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.

ಆಯೋಗದ ಸದಸ್ಯ ಪರಶುರಾಮ್‌ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ಶುಲ್ಕವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಹೈಕೋರ್ಟ್‌ ಸೂಚನೆ ನೀಡಿದೆ. ಮಕ್ಕಳು ಶುಲ್ಕ ಪಾವತಿಸಿಲ್ಲವೆಂಬ ಕಾರಣಕ್ಕೆ ಅವರ ಮೇಲೆ ದೌರ್ಜನ್ಯ ನಡೆಸುವಂತಿಲ್ಲ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಸಭೆ ನಡೆಸಿ ವರದಿ ನೀಡಬೇಕು ಎಂದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ಪರಿಶೀಲಿಸಿದಾಗ, ಅಂಗನವಾಡಿಗಳಲ್ಲಿ ಮೂಲ ಸೌಲಭ್ಯ ಇಲ್ಲದಿರುವುದು, 100 ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಇಲಾಖೆಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಸದಸ್ಯರಾದ ರಾಘವೇಂದ್ರ, ಶಂಕರಪ್ಪ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಕಡೆ ಗಮನ ಹರಿಸುವಂತೆ ಸ್ಪಷ್ಟ ಶಿಕ್ಷಣ ಇಲಾಖೆ ನಿರ್ದೇಶನ ನೀಡಲಾಗಿದೆ. ಈ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ, ಮಕ್ಕಳ ಸಾಗಣಿಕೆಯೂ ಆಗುತ್ತಿದೆ, ಲೈಂಗಿಕ ದೌರ್ಜನ್ಯಕ್ಕೂ ತುತ್ತಾಗುತ್ತಿದ್ದಾರೆ. ಶಾಲೆ ಬಿಡಲು ನಿಜವಾದ ಕಾರಣವೇನು? ಪೋಷಕರ ವಲಸೆಗೆ ಕಾರಣವೇನು? ಎಂಬುದನ್ನು ತಿಳಿದುಕೊಳ್ಳಬೇಕು. ಮಕ್ಕಳು ಹಾಗೂ ಪೋಷಕರನ್ನು ಪತ್ತೆ ಹಚ್ಚಿ ಕೌನ್ಸೆಲಿಂಗ್‌ ಮಾಡಿ, ಅಗತ್ಯವಿದ್ದರೆ ಪುನರ್ವಸತಿ ಕಲ್ಪಿಸಬೇಕು ಎಂದರು.

ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಿಆರ್‌ಪಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ರ್‍ಯಾಂಪ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)