ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ: ಗೊಂದಲಕ್ಕೆ ಅವಕಾಶ ನೀಡಬೇಡಿ: ಡಿ.ಸಿ ಸೂಚನೆ

’ಚುನಾವಣಾ ಆಯೋಗದ ಮಾರ್ಗಸೂಚಿ ಅರಿತು ಕಾರ್ಯ ನಿರ್ವಹಿಸಿ’
Last Updated 20 ಮೇ 2019, 14:16 IST
ಅಕ್ಷರ ಗಾತ್ರ

ಹಾಸನ: ಮತ ಎಣಿಕೆ ವೇಳೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ಸಮಾಧಾನದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.

ಲೋಕಸಭಾ ಚುನಾವಣೆ ಮತ ಎಣಿಕೆಗೆ ನಿಯೋಜನೆಗೊಂಡಿರುವ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗೆ ಹಾಸನಾಂಬ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸರಿಯಾಗಿ ಅರಿತು ಮತ ಎಣಿಕೆ ಮಾಡಬೇಕು ಎಂದರು.

ಮೇ 23 ರಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಎಣಿಕೆ ವೇಳೆ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಈ ಬಾರಿ ಮತ ಎಣಿಕೆ ದತ್ತಾಂಶ ನಿರ್ವಹಣೆಗೆ ಸುವಿಧ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ. ಅದರ ಬಳಕೆ ಬಗ್ಗೆ ತಾಂತ್ರಿಕ ನಿರ್ವಾಹಕರು ಗಮನ ಹರಿಸಬೇಕು. ಚುನಾವಣಾಧಿಕಾರಿ ಅನುಮೋದನೆ ನಂತರ ಪ್ರತಿ ಸುತ್ತಿನ ಮತಗಳನ್ನು ಅಪ್‍ಲೋಡ್ ಮಾಡಬೇಕು ಎಂದು ಡಿ.ಸಿ ನಿರ್ದೇಶನ ನೀಡಿದರು.

ಮೇ 21 ರಂದು ಎಲ್ಲಾ ಎಣಿಕೆ ಸಿಬ್ಬಂದಿಗೆ ಬೆಳಗ್ಗೆ 8 ರಿಂದ ಎಣಿಕೆ ಪೂರ್ವ ತಾಲೀಮು ಕುರಿತು ತರಬೇತಿ ನೀಡಲಾಗುವುದು. ಯಾವುದೇ ಗೊಂದಲಗಳಿದ್ದರೂ ಕೇಳಿ ಪರಿಹರಿಸಿಕೊಳ್ಳಬಹುದು. ಡಾಟಾ ಎಂಟ್ರಿ ಮಾಡುವ ಸಿಬ್ಬಂದಿ ಜಾಗರೂಕತೆಯಿಂದ, ಸಮಾಧಾನಕರವಾಗಿ ಅಂಕಿ ಅಂಶ ನೋಂದಣಿ ಮಾಡಬೇಕು ಎಂದು ಅವರು ಹೇಳಿದರು.

ಎಲ್ಲಾ ಕೊಠಡಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಣಿಕೆಯ ಪ್ರತಿಯೊಂದು ಹಂತದ ಚಿತ್ರೀಕರಣಕ್ಕಾಗಿ ವಿಡಿಯೊಗ್ರಾಫರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಸುತ್ತು ಮುಗಿದ ನಂತರ ಫಲಿತಾಂಶದ ಮಾಹಿತಿಯನ್ನು ಎ.ಆರ್.ಓ. ಅನುಮತಿ ಪಡೆದು ಅಭ್ಯರ್ಥಿಗಳಿಗೆ ನೀಡಬೇಕು ಎಂದರು.

ಎಣಿಕೆ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ಫಲಿತಾಂಶ ಬಟನ್ ಒತ್ತಿ, ಅದರ ವಿವರಗಳನ್ನು 17 ಸಿ ನಮೂನೆಯ ಭಾಗ-2 ರಲ್ಲಿ ನಮೂದಿಸಿ ಹಾಜರಿರುವ ಎಣಿಕೆ ಏಜೆಂಟರ ಸಹಿ ಪಡೆದು ಚುನಾವಣಾಧಿಕಾರಿಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಮತ ಎಣಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT