ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಕ್ಕಾಗಿ ಧರ್ಮದ ಅಸ್ತ್ರ ಬಳಕೆ: ಸಿ.ಎಂ.ಇಬ್ರಾಹಿಂ ವಾಗ್ದಾಳಿ

Last Updated 7 ಏಪ್ರಿಲ್ 2019, 15:35 IST
ಅಕ್ಷರ ಗಾತ್ರ

ಹಾಸನ: ಬಿಜೆಪಿಯವರು ಧರ್ಮವನ್ನು ಮತಗಳಿಸಲು ಅಸ್ತ್ರವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಆರೋಪಿಸಿದರು.

ಇಲ್ಲಿನ ಹುಣಸಿನಕೆರೆಯಲ್ಲಿ ಆಯೋಜಿಸಿದ್ದ ಜೆಡಿಎಸ್‌ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾವಣ, ದುರ್ಯೋಧನ ಮಾಡಿದ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಐದು ವರ್ಷದ ಆಡಳಿತದಲ್ಲಿ ಒಂದೇ ಒಂದು ಒಳ್ಳೆಯ ಕೆಲಸ ಮಾಡಿರುವ ಉದಾಹರಣೆ ಇಲ್ಲ. ಮೋದಿಗೆ ದಯೆ ಇದ್ದಿದ್ದರೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ನೋಟ್‌ ಬ್ಯಾನ್‌ ಆದಾಗ ಸಾಲಿನಲ್ಲಿ ನಿಂತು 300 ಜನ ಅಮಾಯಕರು ಸತ್ತರು. ಮೋದಿಯನ್ನು ಟೀಕಿಸಿದರೆ ದೇಶದ್ರೋಹಿಗಳೆಂಬ ಪಟ್ಟ ಕಟ್ಟಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಲ್ಕು ದಶಕದ ಇತಿಹಾಸದಲ್ಲಿ ನಿರುದ್ಯೋಗ ಸಮಸ್ಯೆ ಈ ಪ್ರಮಾಣದಲ್ಲಿ ಇರಲಿಲ್ಲ. 6.5 ಕೋಟಿ ನಿರುದ್ಯೋಗಿಗಳಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ 600 ಸೈನಿಕರು ಹುತಾತ್ಮರಾದರು. ಸೈನಿಕರಿಗೆ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಗರಿಷ್ಠ ಬೆಲೆಯ ನೋಟು ಅಮಾನ್ಯೀಕರಣ ಮಾಡಿದರೂ ಕಪ್ಪು ಹಣ ಪತ್ತೆಯಾಗಲಿಲ್ಲ. ಹೊಸ ನೋಟು ಮುದ್ರಿಸಲು ₹ 26 ಸಾವಿರ ಕೋಟಿ ಬೇಕಾಯಿತು ಎಂದು ವಿವರಿಸಿದರು.

ಜೆಡಿಎಸ್‌ ಮುಖಂಡ ಬಿ.ವಿ. ಕರೀಗೌಡ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕಾಯಿತು. ಆ ತಪ್ಪು ಈ ಬಾರಿ ಮರಕಳುಹಿಸಬಾರದು ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್‌ ಮಾತನಾಡಿ, ಬಡತನ, ನಿರುದ್ಯೋಗ ನಿರ್ಮೂಲನೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ, ಐದು ವರ್ಷದಲ್ಲಿ ಜನಪರ ಆಡಳಿತ ನೀಡಲಿಲ್ಲ. ಸೈನಿಕರ ಹೆಸರು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಪ್ರೀತಂ ಗೌಡ ಅವರನ್ನು ನಾಜುಕಯ್ಯ ಎಂದು ಝರಿದ ಮಹೇಶ್‌, ಚುನಾವಣೆಗೂ ಮುನ್ನ ಕಾಣುತ್ತಿದ್ದ ನೀರಿನ ಟ್ಯಾಂಕ್ ಹಾಗೂ ಕಸದ ವಾಹನ ಈಗ ನಾಪತ್ತೆಯಾಗಿವೆ. ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ರಾಜ್ಯಸಭೆ ಚುನಾವಣೆಯಲ್ಲಿ ಮಲ್ಯಗೆ ಮತ ಹಾಕಲುಜ ₹ 1.5 ಕೋಟಿ ಹಣ ಪಡೆದಿದ್ದ ವ್ಯಕ್ತಿ ಎಂದು ಆರೋಪಿಸಿದರು.

ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಅಲ್ಪಸಂಖ್ಯಾತರು ಇರುವ ಹತ್ತು ವಾರ್ಡ್‌ಗಳಲ್ಲಿ ₹ 35 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹತ್ತು ಸಾವಿರ ಮನೆ ನಿರ್ಮಾಣ ಹಾಗೂ ಹಕ್ಕುಪತ್ರಗಳನ್ನು ಕೊಡಿಸದಿದ್ದರೆ ರಾಜಕೀಯಕ್ಕೆ ಬರುವುದಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಆನಂದ್‌, ಮುಖಂಡರಾದ ಪಟೇಲ್‌ ಶಿವರಾಂ, ಮೊಯಿದ್‌ ಅಲ್ತಾಫ್‌, ಶಫಿ ಅಹಮದ್‌, ಇರ್ಷಾದ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT