ಬುಧವಾರ, ಸೆಪ್ಟೆಂಬರ್ 18, 2019
26 °C
ಅತಿವೃಷ್ಟಿಗೆ ₹ 302 ಕೋಟಿ ನಷ್ಟ, ಸರ್ಕಾರಕ್ಕೆ ವರದಿ ಸಲ್ಲಿಕೆ

ಮತ್ತೆ ಮನೆ ಕುಸಿತದ ಭೀತಿ

Published:
Updated:
Prajavani

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆಗಸ್ಟ್ ಮೊದಲ ವಾರದಲ್ಲಿ ಸುರಿದ ಜಡಿ ಮಳೆಯಿಂದ ಈಗಾಗಲೇ ನೂರಾರು ಮನೆ ಕುಸಿದು ನಿವಾಸಿಗಳು ಬೀದಿಗೆ ಬಿದ್ದಿದ್ದಾರೆ. ಇದರ ನಡುವೆಯೇ ಮತ್ತೆ ಮಳೆ ಶುರುವಾಗಿರುವುದರಿಂದ ಮತ್ತೆ ಮನೆ ಕುಸಿತದ ಭೀತಿ ಉಂಟಾಗಿದೆ.

ಹಾಸನ, ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕುಗಳಲ್ಲಿ ಬೆಳಿಗ್ಗೆಯಿಂದಲೂ ನಿರಂತರವಾಗಿ ಮಳೆಯಾಗಿದೆ. ಹಲವು ಕಡೆ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಮನೆಗಳಿಗ ನೀರು ನುಗ್ಗಿದೆ. ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೂ ತೊಂದರೆ ಆಗಿದೆ.

ಎರಡು ದಿನಗಳ ಹಿಂದೆ ದೋಣಿಗಾಲ್‌ನಲ್ಲಿ ನಿಸ್ಸಿಮಾ ಬಾನು ಅವರ ಮನೆ ಕುಸಿದು ಬಿದ್ದಿದ್ದು, ಘಟನೆ ನಡೆದಾಗ ಮನೆಯಲ್ಲಿ ಯಾರು ಇರಲಿಲ್ಲ.

ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆಯಲ್ಲಿ ಭೂ ಕುಸಿತದ ಭೀತಿ ಉಂಟಾಗಿದೆ. ಒಂದೆಡೆ ಮನೆ ಕುಸಿತದ ಭೀತಿ ಇದ್ದರೆ ಮತ್ತೊಂದೆಡೆ ಶಿರಾಡಿಘಾಟ್ ನಲ್ಲಿ ಅಲ್ಲಲ್ಲಿ ಭೂಮಿ ಕುಸಿಯುತ್ತಿದೆ.

ಭಾರಿ ಮಳೆಯಿಂದ ಈಗಾಗಲೇ ಚಾರ್ಮಾಡಿ ಘಾಟ್ ಬಂದ್ ಆಗಿರುವುದರಿಂದ ಎಲ್ಲಾ ವಾಹನಗಳು ಶಿರಾಡಿ ಮಾರ್ಗದಲ್ಲೇ ಸಂಚರಿಸುವ ಕಾರಣ ವಾಹನ ದಟ್ಟಣೆ ಹೆಚ್ಚಾಗಿದೆ.

ಈ ನಡುವೆ ಸಕಲೇಶಪುರ ತಾಲ್ಲೂಕು ಮಾರನಹಳ್ಳಿ ಸಮೀಪ ರಸ್ತೆ ಪಕ್ಕದ 20 ಅಡಿ ಎತ್ತರದಲ್ಲಿರುವ ಬೃಹತ್ ಗಾತ್ರದ ಬಂಡೆ ಯಾವಾಗ ಬೇಕಾದರೂ ರಸ್ತೆಗೆ ಉರುಳಬಹುದಾಗಿದೆ.

‘ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು, ಸಾವಿರಾರು ವಾಹನ ಚಾಲಕರು ಕೈಯಲ್ಲಿ ಜೀವ ಹಿಡಿದು ಕೊಳ್ಳಬೇಕಾಗಿದೆ. ಅಕಸ್ಮಾತ್ ಬೃಹತ್ ಬಂಡೆ ಉರುಳಿದರೆ, ರಸ್ತೆ ಸೇರಿದಂತೆ ಇನ್ನಿಲ್ಲದ ಅನಾಹುತ ಸೃಷ್ಟಿಯಾಗಲಿವೆ’ ಎಂದು ವಾಹನ ಚಾಲಕ ನಿಜಾಮ್‌ ಆತಂಕ ವ್ಯಕ್ತಪಡಿಸಿದರು.

ರಸ್ತೆಯ ಪಕ್ಕದಲ್ಲೇ ದೊಡ್ಡ ದೊಡ್ಡ ಹೆಬ್ಬಂಡೆ ಇರುವುದರಿಂದ ಅವು ಯಾವಾಗ ಬೇಕಾದರೂ ರಸ್ತೆ ಮೇಲೆ ಉರುಳಬಹುದು. ಅಕಸ್ಮಾತ್ ಹಾಗಾದರೆ, ಕರಾವಳಿ ಭಾಗದ ಸಂಪರ್ಕವೇ ಕಡಿದು ಹೋಗಲಿದೆ.

ಜಲಾನಯನ ಪ್ರದೇಶಗಳಾದ ಸಕಲೇಶಪುರ, ಮೂಡಿಗೆರೆಯಲ್ಲಿ ಜೋರು ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, 20 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಈಗಾಗಲೇ ಜಿಲ್ಲಾಧಿಕಾರಿ ಆರ್.ಗಿರೀಶ್‌ ಅವರು ಶಿರಾಡಿ ಘಾಟ್‌ ಮಾರ್ಗ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದ್ದಾರೆ.

‘ಶಿರಾಡಿಯಲ್ಲಿ ಭೂಕುಸಿತದ ಸನ್ನಿವೇಶ ಇಲ್ಲ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಒಂದು ವೇಳೆ ಅಪಾಯದ ಸನ್ನಿವೇಶ ನಿರ್ಮಾಣವಾದರೆ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತುರ್ತು ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಯಾರೂ ಆಂತಕ ಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್‌ ಹೇಳಿದರು.

‘ಜಿಲ್ಲೆಯಲ್ಲಿ ಆಗಸ್ಟ್ ಮಳೆಯಿಂದ ಆಗಿರುವ ಹಾನಿ ಸಂಬಂಧ ಹಂತ ಹಂತವಾಗಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ. ಜೋರು ಮಳೆಗೆ ಜಿಲ್ಲೆಯಲ್ಲಿ ₹ 302 ಕೋಟಿ ಅಂದಾಜು ಹಾನಿಯಾಗಿದೆ ಎಂದು ಸರಕಾರಕ್ಕೆ ವರದಿ ನೀಡಿದ್ದೇವೆ. ಸರ್ಕಾರ ಪರಿಶೀಲಿಸಿ ಪರಿಹಾರ ಹಣ ಬಿಡುಗಡೆ ಮಾಡಲಿದೆ’ ಎಂದರು.

 

Post Comments (+)