ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮ: ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಡಿ.ಸಿ ಗಿರೀಶ್
Last Updated 27 ಸೆಪ್ಟೆಂಬರ್ 2020, 14:30 IST
ಅಕ್ಷರ ಗಾತ್ರ

ಹಾಸನ: ಸಾಕಷ್ಟು ಐತಿಹಾಸಿಕ ಹಾಗೂ ಪ್ರಾಕೃತಿಕ ಪ್ರವಾಸ ತಾಣಗಳಿದ್ದು, ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಪ್ರವಾಸಿ ತಾಣಗಳಿಗೆ ಹಂತ ಹಂತವಾಗಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್‌ ಹೇಳಿದರು.

’ವಿಶ್ವ ಪ್ರವಾಸೋದ್ಯಮ ದಿನಾಚರಣೆ’ ಅಂಗವಾಗಿ ಭಾನುವಾರ ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್‌, ರೆಸಾರ್ಟ್‌, ಹೋಂಸ್ಟೇ ಮಾಲೀಕರ ಸಂಘದ ಆಶ್ರಯದಲ್ಲಿ ‘ಬುಲ್ ಟಸ್ಕರ್ಸ್’ ಬೆಂಗಳೂರು ತಂಡದವರ ಬೈಕ್ ಜಾಥಾ, ಸ್ವಚ್ಛತಾ ಕಾರ್ಯಕ್ರಮ ಮತ್ತು ಜಲ ಸಾಹಸ ಕ್ರೀಡೆ ಹಾಗೂ ಪ್ರವಾಸಿ ಟ್ಯಾಕ್ಸಿಗಳವಿತರಣೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತಂದಿದ್ದು, 2020 ರಿಂದ 2025 ವರ್ಷಗಳ ವರೆಗೆಚಾಲ್ತಿಯಲ್ಲಿರುತ್ತದೆ. ಅದರಲ್ಲಿ ಅನೇಕ ರೀತಿಯ ವಿನೂತನ ಸೇವೆಗಳು ಹಾಗೂ ಪ್ರವಾಸೋದ್ಯಮಕ್ಕೆಸಂಬಂಧಿಸಿದಂತೆ ಪ್ರೋತ್ಸಾಹ ಮತ್ತು ರಿಯಾಯಿತಿ ನೀಡಲಾಗುವುದು ಎಂದರು.

10 ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡುವಂತೆ ಹಾಗೂ ₹ 5 ಸಾವಿರ ಕೋಟಿ ಬಂಡವಾಳಹೂಡುವಂತಹ ನೀತಿಯನ್ನು ಹೊಸದಾಗಿ ಮಾಡಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಪರೋಕ್ಷವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಮಧ್ಯಮ ವರ್ಗದ ಆದಾಯವು ಹೆಚ್ಚಲಿದೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ನಾಣ್ಣುಡಿಯಂತೆ ಎಲ್ಲರೂ ಓದುವುದರ ಜೊತೆಗೆ ಹಲವಾರು ಕಡೆಗಳಲ್ಲಿ ಸಂಚರಿಸಿಉತ್ತಮ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ದೇಶದಾದ್ಯಂತ ಕೋವಿಡ್ ಸೋಂಕು ಹರಡುತ್ತಿರುವ ಕಾರಣ ಪ್ರವಾಸೋದ್ಯಮ ಕ್ಷೇತ್ರ ನಷ್ಟ ಅನುಭವಿಸುತ್ತಿದೆ. ಹಾಗಾಗಿ ಅದನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಬೇಕು. ಜತೆಗೆ ಜನರಿಗೆ ಧೈರ್ಯ ಹಾಗೂ ಅರಿವು ಮೂಡಿಸಬೇಕು ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಸಂಜಯ್ ಮಾತನಾಡಿ, ಈ ಬಾರಿ ಪ್ರವಾಸೋದ್ಯಮ ಘೋಷವಾಕ್ಯ ‘ಪ್ರವಾಸೋದ್ಯಮ ಮತ್ತು ಗ್ರಾಮೀಣ ಅಭಿವೃದ್ಧಿ’ಎಂಬುದಾಗಿದೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದರು.

ಬುಲ್‌ ಟಸ್ಕರ್ಸ್‌ ಬೆಂಗಳೂರು ಕ್ಲಬ್‌ ಸದಸ್ಯ ರೋಹಿತ್‌ ಮಾತನಾಡಿ, ‘ಕ್ಲಬ್‌ನಲ್ಲಿ ವೈದ್ಯರು, ಉದ್ಯಮಿಗಳು, ಐಟಿ ಕಂಪನಿ ಉದ್ಯೋಗಿಗಳು ಸೇರಿದಂತೆ 200ಕ್ಕೂ ಹೆಚ್ಚು ಸದಸ್ಯರಿದ್ದು, ದೇಶದಾದ್ಯಂತ ಪ್ರವಾಸ ಮಾಡುತ್ತೇವೆ. ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತೇವೆ. ಹಾಸನ ಜಿಲ್ಲಾಡಳಿತ ಈ ಬಾರಿ ಆಹ್ವಾನಿಸಿ, ಪ್ರಮಾಣ ಪತ್ರ ನೀಡಿರುವುದು ಖುಷಿ ಕೊಟ್ಟಿದೆ.ಬೈಕ್ ಜಾಥಾ ಬೇಲೂರು ಮಾರ್ಗ ಮೂಲಕ ಸಕಲೇಶಪುರ ತಲುಪಲಿದೆ’ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಪ್ರವಾಸೋದ್ಯಮ ಅಧಿಕಾರಿ ನಾಗರಾಜು, ಜಿಲ್ಲಾ ಸಮಾಲೋಚಕ ನಾಗರಾಜು ಚಿಟ್ಟಿ, ಎಣಿಕೆದಾರ ಅಸ್ಲಾಂ ಉಲ್ಲಾ ಶರೀಫ್, ರಾಮಚಂದ್ರ ಹೆಗಡೆ ಹಾಗೂ ಪ್ರವಾಸಿ ಮಿತ್ರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT