ಗುರುವಾರ , ನವೆಂಬರ್ 14, 2019
18 °C
ಹದಗೆಟ್ಟ ಬೆಂಗಳೂರು–ಮಂಗಳೂರು ರಾಷ್ಟ್ರೀಯ

ಹೆದ್ದಾರಿ ಮರು ಡಾಂಬರೀಕರಣಕ್ಕೆ ಕ್ರಮ: ಸೂರ್ಯವಂಶಿ

Published:
Updated:

ಸಕಲೇಶಪುರ: ಸಂಪೂರ್ಣ ಗುಂಡಿಬಿದ್ದು ಹಾಳಾಗಿರುವ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಸನ ಬೈಪಾಸ್‌ನಿಂದ ಹೆಗ್ಗದ್ದೆವರೆಗೆ 55 ಕಿ.ಮೀ. ಮರು ಡಾಂಬರೀಕರಣ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ ಪ್ರದೇಶ ಮುಖ್ಯಸ್ಥ ಸೂರ್ಯವಂಶಿ ಹೇಳಿದರು.

ಹೆದ್ದಾರಿ ಪರಿಶೀಲನೆಗಾಗಿ ಶನಿವಾರ ಭೇಟಿ ನೀಡಿದ್ದ ಅವರನ್ನು ಇಲ್ಲಿಯ ವಿವಿಧ ಸಂಘಟನೆಗಳು ತಡೆದು ಹೆದ್ದಾರಿ ಅವ್ಯವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕ್ರಮದ ಭರವಸೆ ನೀಡಿದರು.

₹ 7.40 ಕೋಟಿ ಅಂದಾಜು ವೆಚ್ಚದಲ್ಲಿ ಕೇವಲ ಗುಂಡಿಗಳನ್ನು ಮುಚ್ಚುವುದರಿಂದ ರಸ್ತೆ ಸರಿಹೋಗುವುದಿಲ್ಲ. 2016 ರಿಂದ ಮಾರ್ಗದ ಚತುಷ್ಪಥ ಕಾಮಗಾರಿ ಕೂಡ ಸ್ಥಗಿತಗೊಂಡಿದೆ. ನಿತ್ಯ ಸಾವಿರಾರು ಪ್ರಯಾಣಿಕರು ಹಾಗೂ ವಾಹನಗಳಿಗೆ ಭಾರಿ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಯಡೇಹಳ್ಳಿ ಆರ್‌. ಮಂಜುನಾಥ್‌ ಹಾಗೂ ಬಾಳ್ಳು ರೋಹಿತ್‌ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

₹ 705 ಕೋಟಿ ರೂಪಾಯಿಗೆ ಟೆಂಡರ್‌ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ನಿರ್ವಹಿಸಿಲ್ಲ. ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿಗೆ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಅಲ್ಲವೇ ಎಂದು ವಂಶಿ ಅವರನ್ನು ಜಿ.ಪಂ. ಸದಸ್ಯ ಸುಪ್ರದೀಪ್ತ ಯಜಮಾನ್‌ ಹಾಗೂ ರೋಹಿತ್‌ ಪ್ರಶ್ನೆ ಮಾಡಿದರು.

‘ಈಗ ಕಾಮಗಾರಿಗೆ ತಗಲುವ ಹೆಚ್ಚುವರಿ ವೆಚ್ಚವನ್ನು. ಗುತ್ತಿಗೆ ಪಡೆದು ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರಿಂದ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು’ ಎಂದು ಸೂರ್ಯವಂಶಿ ಹೇಳಿದರು.

‘ನೀವು ಏನು ಮಾಡುತ್ತಿರೋ ಗೊತ್ತಿಲ್ಲ, ಹಾಸನದಿಂದ ಹೆಗ್ಗದ್ದೆ ವರೆಗೆ ಶೀಘ್ರದಲ್ಲಿ ಮರು ಡಾಂಬರೀಕರಣ ಮಾಡಬೇಕು. ಇಲ್ಲವಾದರೆ ಪುನಃ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಅಧ್ಯಕ್ಷ ಸಾಗರ್‌ ಜಾನೇಕೆರೆ ಎಚ್ಚರಿಕೆ ನೀಡಿದರು.

ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಸೋಮಶೇಖರ್‌, ಜನಸ್ಪಂದನ ವೇದಿಕೆ ಅಧ್ಯಕ್ಷ ಅರುಣ್‌ ರಕ್ಷಿದಿ, ಟಿಎಪಿಸಿಎಂಎಸ್‌ ನಿರ್ದೇಶಕ ಹಲಸುಲಿಗೆ ರಮೇಶ್, ಯುವ ಕಾಂಗ್ರೆಸ್‌ ಮುಖಂಡ ಫಾರೂಕ್‌, ರಾಜ್‌ಕಮಲ್‌ ಗುತ್ತಿಗೆದಾರ ಕಂಪನಿಯ ಎಂಡಿ ಅರ್ಪಿತ್‌ ಸುರಾನಾ ಹಾಗೂ ಇತರರು ಇದ್ದರು.

ಗುಂಡಿ ಮುಚ್ಚುವ ಕಾರ್ಯ ಶುರು: ಬಾಳ್ಳುಪೇಟೆ ಸಮೀಪದ ಹೆದ್ದುರ್ಗ ಕೂಡಿಗೆ ಹಾಗೂ ದೋಣಿಗಾಲ್‌ ಸಮೀಪದ ಕಪ್ಪಳ್ಳಿ ಬಳಿಯಿಂದ ಶನಿವಾರ ಹೆದ್ದಾರಿಯ ಗುಂಡಿ ಮುಚ್ಚುವ ಕಾರ್ಯವನ್ನು ಎನ್‌ಎಚ್‌ಎಐ ಇಲಾಖೆ ಶುರು ಮಾಡಿದೆ.

ಪ್ರತಿಕ್ರಿಯಿಸಿ (+)