ಶುಕ್ರವಾರ, ನವೆಂಬರ್ 27, 2020
18 °C
ಮೂಲ ಸೌಲಭ್ಯ ವಂಚಿತ ಬಂಬೂ ಬಜಾರ್‌‌

ಹಾಸನ: ಮೇದರ ಬದುಕು ದುಸ್ತರ

ಜೆ.ಎಸ್.ಮಹೇಶ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆಧುನಿಕ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್‌ ವಸ್ತುಗಳ ಬಳಕೆಯಿಂದ ಗುಡಿ ಕೈಗಾರಿಕೆಯಲ್ಲಿ ಬದುಕು ನಡೆಸುತ್ತಿರುವ ಮೇದರ ಸ್ಥಿತಿ ಶೋಚನೀಯವಾಗಿದೆ. ಹಲವು ಸಮಸ್ಯೆಗಳ ನಡುವೆಯೂ ನಗರದ ಬಂಬೂ ಬಜಾರ್‌ನಲ್ಲಿ 25 ಮೇದರ ಕುಟುಂಬಗಳು ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿವೆ.

ಹಿಂದೆ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಬಿದಿರಿನ ಮೊರ, ಕುಕ್ಕೆ ಮತ್ತಿತರ ಸಾಮಗ್ರಿಗಳಿಗೆ ಹೊಂದಿಕೊಂಡಿದ್ದರು. ಆದರೆ ಈಗ ಪ್ಲಾಸ್ಟಿಕ್‌ ಬಳಕೆ ಎಲ್ಲೆಡೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್‌ ಮೊರಗಳು, ಸ್ಟೀಲ್‌, ಅಲುಮಿನಿಯಂ ಪಾತ್ರೆಗಳು ಇವುಗಳ ಸ್ಥಾನ ತುಂಬಿದ್ದು, ಬಿದಿರಿನಿಂದ ಹೆಣೆದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಆದರೆ, ಮಗು ಹುಟ್ಟಿದಾಗಿನ ತೊಟ್ಟಿಲು, ಮದುವೆ ಸಂಪ್ರದಾಯ, ಬಾಗಿನ ಕೊಡುವುದು, ವ್ಯಕ್ತಿ ಸತ್ತಾಗ ಬಿದುರಿನ ಚಟ್ಟವೇ ಬೇಕು. ಹಾಗಾಗಿ ಮೇದರು ಅಲ್ಪಸ್ವಲ್ಪ ಉಸಿರಾಡಿಕೊಂಡಿದ್ದಾರೆ.

ಸಂತೆಪೇಟೆಯ ನಗರಸಭೆ ಕಚೇರಿಗೆ ಹೊಂದಿಕೊಂಡಂತಿರುವ ಬಂಬೂ ಬಜಾರ್‌ ನಲ್ಲಿ 25 ಕುಟುಂಬಗಳು ವಾಸಿಸುತ್ತಿವೆ. ಹದಗೆಟ್ಟ ರಸ್ತೆ, ಬೀದಿ ದೀಪ, ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತೊಂದರೆ ಪಡುತ್ತಿದ್ದಾರೆ. ಹಲವು ವರ್ಷಗಳಿಂದ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಂದಾಜು 1500 ಜನರು ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಈ ಮೇದ ಜನಾಂಗದವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ.

‘ಒಂದು ಬುಟ್ಟಿ ಹೆಣೆಯಲು ಮೂರು ದಿನ ಬೇಕು. ಬಿದಿರನ್ನು ವಾರದ ಹಿಂದೆಯೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಹಸಿ ಬಿದಿರು ಬಾಡಿದ ನಂತರ ಅದರಿಂದ ಬುಟ್ಟಿ ಹಾಗೂ ಇತರೆ ವಸ್ತುಗಳನ್ನು ಹೆಣೆಯಬಹುದು. ಅಷ್ಟು ಕಷ್ಟಪಟ್ಟು ಬುಟ್ಟಿ ಹೆಣೆದರೂ ಬೆಲೆ ತೀರಾ ಕಡಿಮೆ ಇದೆ. ಒಂದು ಜೊತೆ ಮೊರಕ್ಕೆ ₹100, ಒಂದು ಬುಟ್ಟಿಗೆ ₹100, ತೊಟ್ಟಿಲು ₹400, ಕೋಳಿ ಮುಚ್ಚುವ ಪಂಜರಕ್ಕೆ ₹ 300, ಸುತ್ತಿಗೆ ಕಾವು ₹50 ರಿಂದ 60 ಕ್ಕೆ ಮಾರಾಟವಾಗುತ್ತವೆ’ಎಂದು ಬಂಬೂ ಬಜಾರಿನ ನಾಗರಾಜ್‌ ತಿಳಿಸಿದರು.

‘ಮಂಗಳವಾರ ಸಂತೆಯಲ್ಲಿ ಹೆಣೆದ ಬುಟ್ಟಿಗಳನ್ನು ಬೀದಿ ಬದಿಯಲ್ಲಿ ಇಟ್ಟು ಮಾರಾಟ ಮಾಡಬೇಕು. ಅಲ್ಲಿ ವ್ಯಾಪಾರ ಅಷ್ಟಕಷ್ಟೇ. ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ನಷ್ಟಕ್ಕೆ ಒಳಗಾದ ಬೆಳೆಗಾರರು, ಆಟೊ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ, ದೋಬಿಗಳಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿತು. ಆದರೆ ಜಿಲ್ಲೆಯಲ್ಲಿ ಮೇದ ಸಮುದಾಯದವರು 1500 ಜನ ಇದ್ದರೂ ಅಧಿಕಾರಿಗಳು ಕಡೆಗಣಿಸಿದ್ದಾರೆ’ಎಂದು ಬೇಸರ ವ್ಯಕ್ತಪಡಿಸಿದರು.

‘ಬಂಬೂ ಬಜಾರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. 25 ಕುಟುಂಬಗಳು ವಾಸಿಸುತ್ತಿದ್ದರೂ ಈವರೆಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಕುಡಿಯುವ ನೀರು, ಬೀದಿ ದೀಪ, ಚರಂಡಿ ಹೀಗೆ ಹತ್ತಾರು ಸಮಸ್ಯೆಗಳು ಇವೆ. ಜಿಲ್ಲಾಡಳಿತದ ವತಿಯಿಂದ 20*20 ಅಳತೆಯ ಮನೆ ನಿರ್ಮಾಣ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. 40 ರಿಂದ 50 ಅಡಿ ಏಣಿಗಳನ್ನು ತಯಾರಿಸಲು ವಿಶಾಲವಾದ ಜಾಗ ಬೇಕು. ಹಾಗಾಗಿ ಬುಟ್ಟಿ ಹೆಣೆಯುವ ಕೆಲಸಕ್ಕೆ ಪ್ರತ್ಯೇಕ ಜಾಗ ನಿಗದಿ ಮಾಡಿ, ಶೆಡ್‌ ನಿರ್ಮಿಸಿ ಕೊಡಬೇಕು’ ಎಂದು ನಾಗರಾಜ್‌ ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.