ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಿಕದ ಬಳಿ ಮೆಗಾ ಡೇರಿ

ವಿಶ್ವ ಹಾಲು ದಿನಾಚರಣೆ ಸಮಾರಂಭದಲ್ಲಿ ಸಚಿವ ರೇವಣ್ಣ ಹೇಳಿಕೆ
Last Updated 1 ಜೂನ್ 2019, 20:43 IST
ಅಕ್ಷರ ಗಾತ್ರ

ಹಾಸನ: ‘ಕೌಶಿಕದ ಬಳಿ 54 ಎಕರೆ ಜಮೀನಿನಲ್ಲಿ ಮೆಗಾ ಡೇರಿ ಆರಂಭಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಯಿಂದ ಒಂದು ದಿನಕ್ಕೆ 5 ಲಕ್ಷ ಹಾಲಿನ ಪೆಟ್ ಬಾಟಲಿಗಳನ್ನು ತಯಾರಿಸುವಂತಹ ಯೋಜನೆ ಹೊಂದಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ನಗರದ ಡೇರಿ ಆವರಣದಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಹಾಲು ದಿನಾಚರಣೆ ಮತ್ತು ಸರ್ಕಾರಿ ಕಾಲೇಜುಗಳಿಗೆ ಕಂಪ್ಯೂಟರ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಹಾಸನ ಹಾಲು ಒಕ್ಕೂಟ ನಿತ್ಯವೂ 10 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿದೆ ಎಂದರು.

’ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಆರಂಭದಲ್ಲಿ ₹ 250 ಪಾವತಿಸಿ, ವಿಮೆ ಆರಂಭಿಸಿದರೆ ಆಕಸ್ಮಿಕವಾಗಿ ಮರಣ ಹೊಂದಿದರೆ ಸುಮಾರು ₹ 1 ಲಕ್ಷ ದೊರೆಯಲಿದೆ. ವಿಮೆ ಸೌಲಭ್ಯಕ್ಕೆ ಒಳಪಟ್ಟ ಜಾನುವಾರುಗಳು ಮೃತಪಟ್ಟರೆ, ಪರಿಹಾರವಾಗಿ ₹ 50,000 ನೀಡುವ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಸಚಿವರು ತಿಳಿಸಿದರು.

‘ಜಿಲ್ಲೆಯಲ್ಲಿ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ಸಮಾನ ದೃಷ್ಟಿಯಿಂದ ಉನ್ನತ ವಿದ್ಯಾಭ್ಯಾಸಕ್ಕೆ ಹಲವಾರು ಕ್ರಿಯಾ ಯೋಜನೆಗಳು ರೂಪಿತಗೊಂಡಿವೆ. ಅದರಂತೆ ರಾಜ್ಯದ 224 ಕ್ಷೇತ್ರಗಳಲ್ಲಿ ಮೂಲ ಸೌಲಭ್ಯ ಹಾಗೂ 276 ಕೆ.ಪಿ.ಎಸ್ ಶಾಲೆಗಳನ್ನು ಆರಂಭಿಸಲಾಗುವುದು’ ಎಂದು ಹೇಳಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ, ಕೊಡಗಿನ ನಿರ್ದೇಶಕ ಹೇಮಂತ್ ಕುಮಾರ್ ಹಾಜರಿದ್ದರು.

ಕಂಪ್ಯೂಟರ್ ವಿತರಣೆ
ಸಮಾರಂಭದಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಕಾಲೇಜಿಗೆ 10, ಹೊಳೆನರಸೀಪುರದ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 20, ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 10, ಹೆತ್ತೂರಿನ ಪ್ರಥಮ ದರ್ಜೆ ಕಾಲೇಜಿಗೆ 5, ಸಕಲೇಶಪುರ, ಬಾಣಾವರ, ಕಡೂರು, ಆಲೂರು, ಹಾಸನದ ಎಂ.ಜಿ.ರೋಡ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಧದ ಕೋಠಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಉದಯಪುರ ಕಾಲೇಜುಗಳಿಗೆ ತಲಾ 10 ಕಂಪ್ಯೂಟರ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಒಟ್ಟಾರೆಯಾಗಿ 125 ಕಂಪ್ಯೂಟರ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT